ಕೊರೊನಾ ಕಾಲದಲ್ಲಿ ತಮ್ಮ ಜೀವದ ಹಂಗನ್ನು ತೊರೆದು ರೋಗಿಗಳ ಸೇವೆ ಮಾಡಿದ ಮತ್ತು ಸೇವೆ ಮಾಡುತ್ತಲೇ ಕೊರೊನಾಕ್ಕೆ ತುತ್ತಾಗಿ ಮರಣವನ್ನಪ್ಪಿದ ವೈದ್ಯರಿಗೆ ನಾವು ಸಲಾಮ್ ಹೇಳಬೇಕಾಗಿದೆ.
ಕಳೆದ ಒಂದೂವರೆ ವರ್ಷದಿಂದ ಜನರ ಜೀವದೊಂದಿಗೆ ಚೆಲ್ಲಾಟ ನಡೆಸುತ್ತಿರುವ ಕೊರೊನಾದೊಂದಿಗೆ ಹೋರಾಟ ನಡೆಸುತ್ತಿರುವ ವೈದ್ಯರು ನಿಜವಾಗಿಯೂ ‘ವೈದ್ಯೋ ನಾರಾಯಣೋ ಹರಿಃ’ ಮಾತಿಗೆ ಅರ್ಥ ತಂದಿದ್ದಾರೆ.
ತಮ್ಮ ಜೀವದ ಹಂಗನ್ನು ತೊರೆದು ರೋಗಿಗಳ ಸೇವೆ ಮಾಡುತ್ತಿರುವ ವೈದ್ಯರಿಗೆ ಸಲಾಮ್ ಹೇಳುವ ಸಮಯ ಬಂದಿದೆ.
ಭಾರತರತ್ನ ಡಾ.ಬಿದನ್ ಚಂದ್ರ ರಾಯ್ ಅವರ ಜಯಂತಿಯಾದ ಜುಲೈ1ನ್ನು ಭಾರತದಲ್ಲಿ ವೈದ್ಯರ ದಿನಾಚರಣೆಯನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ. ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನಗಳಲ್ಲಿ ವೈದ್ಯರ ದಿನಾಚರಣೆ ಮಾಡಲಾಗುತ್ತಿದೆ. ಅದು ಏನೇ ಇರಲಿ ಕ್ಲಿಷ್ಟಕರ ಸ್ಥಿತಿಯಲ್ಲಿಯೂ ರೋಗಿಗಳ ಶಶ್ರೂಷೆಯಲ್ಲಿ ತೊಡಗಿ ಆರೋಗ್ಯ ಸೇವೆ ನೀಡಿದ ಮತ್ತು ನೀಡುತ್ತಲೇ ಇರುವ ವೈದ್ಯರಿಗೆ ನಾವೆಲ್ಲರೂ ಕೃತಜ್ಞತೆ ಸಲ್ಲಿಸಲೇ ಬೇಕಾಗಿದೆ.
ಭಾರತದಲ್ಲಿ ಜುಲೈ1ನ್ನು ವೈದ್ಯರ ದಿನಾಚರಣೆಯನ್ನಾಗಿ ಆಚರಿಸುವುದರ ಹಿಂದೆ ಹಲವು ಮಹತ್ವದ ಸಂಗತಿಗಳಿವೆ. ಅದು ಮೇಲ್ನೋಟಕ್ಕೆ ಡಾ.ಬಿದನ್ ಚಂದ್ರ ರಾಯ್ ಅವರ ಜನ್ಮದಿನವಾದರೂ ಆ ದಿನವನ್ನು ಆಯ್ಕೆ ಮಾಡಿಕೊಳ್ಳಲು ಹಲವು ಕಾರಣಗಳಿವೆ. ಡಾ.ಬಿದನ್ ಚಂದ್ರ ರಾಯ್ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಹಾತ್ಮ ಗಾಂಧೀಜಿಯವರ ಖಾಸಗಿ ವೈದ್ಯರೂ ಹೌದು. ಅವರು ಲಂಡನ್ ನಿಂದ ಎಫ್.ಆರ್.ಸಿ.ಎಸ್ ಹಾಗೂ ಎಂ.ಆರ್.ಸಿ.ಪಿ ಪದವಿಗಳೆರಡನ್ನೂ ಪಡೆದ ತಜ್ಞವೈದ್ಯ, ಶಸ್ತ್ರಚಿಕಿತ್ಸಕರಾಗಿದ್ದದ್ದು ಮತ್ತೊಂದು ವಿಶೇಷ.

ಇವರು ಅನೇಕ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದರೊಂದಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿ ಜನಸೇವೆಯೊಂದಿಗೆ ಪ್ರತಿ ದಿನ ಸುಮಾರು 2 ಗಂಟೆಗಳ ಕಾಲ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದ್ದರು.
ಇಂತಹ ಮಹಾನ್ ವ್ಯಕ್ತಿ ಜುಲೈ 1, 1882ರಲ್ಲಿ ಜನಿಸಿ ಜುಲೈ 1, 1963ರಂದು ವಿಧಿವಶರಾದರು. ಆದರೆ ಅವರು ಜುಲೈ 1ರಂದು ಜನಿಸಿ, ಜುಲೈ 1ರಂದೇ ಇಹಲೋಕ ತ್ಯಜಿಸಿದ್ದು ವಿಶೇಷ. ಅವರ ನೆನಪು ಚಿರವಾಗಿರಲೆಂದೇ ವೈದ್ಯರ ದಿನಾಚರಣೆಯನ್ನು ಅಸ್ತಿತ್ವಕ್ಕೆ ತರಲಾಗಿದೆ.
ಇವತ್ತು ವೈದ್ಯಲೋಕ ಅಗಾಧವಾಗಿ ಬೆಳೆದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಾಣಸಿಗುವ ಆರೋಗ್ಯ ಕೇಂದ್ರದಿಂದ ಆರಂಭವಾಗಿ ಸೂಪರ್ ಸ್ಪೆಷಾಲಿಟಿ, ಹೈಟೆಕ್ ಆಸ್ಪತ್ರೆಗಳು ನಮ್ಮ ದೇಶದಲ್ಲಿವೆ. ವೈದ್ಯಕೀಯ ಕಾಲೇಜುಗಳು ಪ್ರತಿವರ್ಷ ಲಕ್ಷಾಂತರ ವೈದ್ಯರನ್ನು ತಯಾರು ಮಾಡಿ ಕಳುಹಿಸುತ್ತಿದೆ. ಹೀಗಾಗಿ ವೈದ್ಯಕೀಯ ಕ್ಷೇತ್ರ ವಿಶಾಲವಾಗುತ್ತಿದೆ.

ಈ ಕ್ಷಣದಲ್ಲಿ ಡಾ.ನಾ.ಸೋಮೇಶ್ವರ್ ಹೇಳಿದ ಮಾತುಗಳು ನೆನಪಾಗುತ್ತದೆ ಅದು ಏನೆಂದರೆ, ವೈದ್ಯಕೀಯ ಒಂದು ವೃತ್ತಿಯಲ್ಲ, ಅದು ಅರಿವು, ಮಾನವೀಯತೆ, ಶ್ರದ್ಧೆ ಹಾಗೂ ಸೇವಾಮನೋಭಾವ ಮೇಳೈಸಿರುವ ಸೇವೆ.
ವೈದ್ಯನಾದವನಿಗೆ ಹದ್ದಿನ ಕಣ್ಣುಗಳು, ಸಿಂಹದ ಹೃದಯ ಹಾಗೂ ಹೆಣ್ಣಿನ ಕೋಮಲ ಕರಗಳಿರಬೇಕಾಗುತ್ತದೆ. ಆಗ ಮಾತ್ರ ಅವನು ವೃತ್ತಿಗೆ ನ್ಯಾಯವನ್ನು ಒದಗಿಸಬಲ್ಲನು. ಇದು ಎಷ್ಟೊಂದು ಅರ್ಥಪೂರ್ಣವಾದ ಮಾತುಗಳು ಅಲ್ಲವೆ? ಮತ್ತೊಮ್ಮೆ ವೈದ್ಯರಿಗೆ ಸಲಾಮ್ ಹೇಳಿ ಬಿಡೋಣ..