ಮಂಡ್ಯ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕಾಡು ಪ್ರಾಣಿಯೊಂದು ದಾಳಿ ಮಾಡಿ ಸಾಯಿಸಿರುವ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ನೆಲಮನೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ರಾಮೇಗೌಡ (65) ಎಂಬುವರೇ ಕಾಡುಪ್ರಾಣಿಯ ದಾಳಿಗೆ ಬಲಿಯಾದ ದುರ್ದೈವಿ. ಇವರು ಎಂದಿನಂತೆ ಜಮೀನಿಗೆ ತೆರಳಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದರು. ಈ ವೇಳೆ ಅವರ ಮೇಲೆ ಕಾಡು ಪ್ರಾಣಿ ದಾಳಿ ಮಾಡಿ ಸಾಯಿಸಿದೆ ಎನ್ನಲಾಗಿದೆ.
ಸಾಮಾನ್ಯವಾಗಿ ಜಮೀನಿಗೆ ತೆರಳಿದ ರಾಮೇಗೌಡರು ನಿಗದಿತ ಸಮಯದಲ್ಲಿ ಮನೆಗೆ ಬರುತ್ತಿದ್ದರು. ಆದರೆ ಮಾಮೂಲಿ ಸಮಯ ಕಳೆದರೂ ಬಾರದೆ ಇದ್ದಾಗ ಅವರನ್ನು ಹುಡುಕಿಕೊಂಡು ಮನೆಯವರು ಜಮೀನಿಗೆ ತೆರಳಿದ್ದಾರೆ. ಈ ವೇಳೆ ಅವರು ಶವವಾಗಿ ಬಿದ್ದಿರುವುದು ಗೋಚರಿಸಿದೆ.
ಅವರ ಹೊಟ್ಟೆಭಾಗಕ್ಕೆ ಗಾಯಗಳಾಗಿದ್ದು, ಯಾವ ಪ್ರಾಣಿ ಇವರ ಮೇಲೆ ದಾಳಿ ಮಾಡಿರಬಹುದು ಎಂಬುದು ಇನ್ನಷ್ಟೆ ಗೊತ್ತಾಗಬೇಕಾಗಿದೆ. ಚಿರತೆ ಅಥವಾ ಕಾಡಂದಿ ದಾಳಿ ಮಾಡಿ ಸಾಯಿಸಿರಬಹುದೆಂದು ಗ್ರಾಮಸ್ಥರು ಶಂಕಿಸಿದ್ದಾರೆ. ಈ ಘಟನೆಯಿಂದ ಗ್ರಾಮದಲ್ಲಿ ಆತಂಕ ಸೃಷ್ಟಿಯಾಗಿದ್ದು, ಕೃಷಿ ಚಟುವಟಿಕೆಗೆ ಜಮೀನಿಗೆ ತೆರಳಲು ರೈತರು ಭಯಪಡುವಂತಾಗಿದೆ.