ಮೈಸೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸ್ವಾತಂತ್ರ್ಯ ನಂತರ ರಾಜ್ಯ ಕಂಡ ಅತ್ಯಂತ ಕಡು ಭ್ರಷ್ಟ ಸರ್ಕಾರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಟುವಾಗಿ ಆರೋಪಿಸಿದ್ದಾರೆ.

ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ಸ್ವಾಂತನ ಹೇಳುವ ಸಹಾಯಹಸ್ತ ಮತ್ತು ತೈಲ, ಅಡುಗೆ ಅನಿಲ, ದಿನಬಳಕೆ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಸೈಕಲ್ ಜಾಥಾ ಹಾಗೂ ವಿವಿಧ ಪಕ್ಷಗಳ ಮುಖಂಡರು ಕಾಂಗ್ರೆಸ್ ಸೇರ್ಪಡೆ ಸಮಾರಂಭ ದಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ರಿಗೆ ದುಡ್ಡು ಹೊಡೆಯೊದೇ ಕೆಲಸ.ವಾಗಿದ್ದು, ಜೆಸಿಬಿಯಿಂದ ಹಣ ಬಾಚುತ್ತಿದ್ದಾರೆ ಎಂದು ಆರೋಪಿಸಿದ ಅವರು ಯಡಿಯೂರಪ್ಪ ತನ್ನ ಮೊಮ್ಮಗನ ಖಾತೆಗೆ ಆರ್‌ಟಿಜಿಎಸ್ ಮೂಲಕ ಹಣ ಜಮೆ ಮಾಡುತ್ತಿದ್ದು, ಎಂತಹ ದುರಂತ ಪರಿಸ್ಥಿತಿ ಎದುರಾಗಿದೆ ಎಂದರೆ ಬಿಜೆಪಿಯವರೇ ದುಡ್ಡು ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಕಾಗಿದೆ ಬಂದಿದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಬಡವರ ವಿರೋಧಿ ಸರ್ಕಾರ. ಆದರೆ ಕಾಂಗ್ರೆಸ್ ಅಧಿಕಾರಕೋಸ್ಕರ ಇರುವ ಪಕ್ಷ ಅಲ್ಲ. ಬಡವರ ಪಕ್ಷ, ಚಳವಳಿ ಮತ್ತು ಬದಲಾವಣೆಗಾಗಿ ಇರುವ ಪಕ್ಷ. ರಾಜ್ಯ ಉಳಿಯಬೇಕಾದರೆ ಬಿಜೆಪಿ ತೊಲಗಿ, ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದ ಅವರು ಮುಖವಾಡ ಹಾಕೊಂಡು ಮನ್‌ಕಿ ಬಾತ್ ಮೂಲಕ ಬರೀ ಸುಳ್ಳು ಹೇಳುತ್ತಿದ್ದಾರೆ. ಮೋದಿ ಏನ್ ಹೇಳುವರು ಅದಕ್ಕೆ ವಿರುದ್ಧವಾಗಿ ಅರ್ಥ ಮಾಡಿಕೊಳ್ಳಬೇಕು. ದೇಶ ಅಭಿವೃದ್ಧಿಯಾಗುತ್ತದೆಂದರೆ ದೇಶಕ್ಕೆ ಕೆಟ್ಟ ದಿನಗಳು ಬರಲಿವೆ ಎಂದರ್ಥವಾಗಿದ್ದು, ಅವರು 2014ರಲ್ಲಿ ನೀಡಿದ ಒಂದೇ ಒಂದು ಭರವಸೆ ಈಡೇರಿಸಲಿಲ್ಲ. ಕೇವಲ ಚುನಾವಣೆ ಬಂದಾಗವಷ್ಟೆ ಪಾಕಿಸ್ತಾನ, ಜಮ್ಮುಕಾಶ್ಮೀರ, ಚೈನಾ, 370 ಕಾಯಿದೆಗಳ ಬಗ್ಗೆ ಹೇಳಿ ಜನರ ದಿಕ್ಕು ತಪ್ಪಿಸುತ್ತ ದೇಶವನ್ನು ಹಾಳು ಮಾಡುತ್ತಿದ್ದು, ಬಿಜೆಪಿ ಸರ್ಕಾರ ತಿಗಣೆ ರೀತಿ ಬಡವರ ರಕ್ತ ಕುಡಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಮಾಜಿ ಸಚಿವರಾದ ರಮಾನಾಥ್ ರೈ, ಡಾ.ಎಚ್.ಸಿ.ಮಹದೇವಪ್ಪ, ಶಾಸಕರಾದ ಎಚ್.ಪಿ.ಮಂಜುನಾಥ್, ಅನಿಲ್ ಚಿಕ್ಕಮಾದು, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಯೂತ್ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ, ಮಾಜಿ ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್, ಕಳಲೆ ಕೇಶವಮೂರ್ತಿ, ಹಂಗಾಮಿ ಮೇಯರ್ ಅನ್ವರ್ ಬೇಗ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಮುಂತಾದವರು ಭಾಗವಹಿಸಿದ್ದರು.
ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೊ ವೀಕ್ಷಿಸಸಿ