ಚಾಮರಾಜನಗರ: ಸಾಮಾನ್ಯವಾಗಿ ಗೌರಿ ಹಬ್ಬವನ್ನು ಮನೆಗಳಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ ಪೂಜಿಸಿ ಮುತ್ತೈದೆಯರಿಗೆ ಬಾಗಿನ ನೀಡಲಾಗುತ್ತದೆ. ಆದರೆ ಚಾಮರಾಜನಗರದ ಕುದೇರಿನಲ್ಲಿ ಮಾತ್ರ ಗೌರಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತಿದೆ.
ಗ್ರಾಮದಲ್ಲಿರುವ ಸ್ವರ್ಣ ಗೌರಿ ದೇಗುಲದಲ್ಲಿ ವಿವಿಧ ಪೂಜೆ ಪುರಸ್ಕಾರದೊಂದಿಗೆ ಗೌರಿಯನ್ನು ಪೂಜಿಸಲಾಗುತ್ತದೆ. ಎಲ್ಲ ವರ್ಗದ ಜನತೆ ಯಾವುದೇ ಜಾತಿ ಭೆದಭಾವವಿಲ್ಲದೇ ಜತೆಗೂಡಿ ಗೌರಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸದೆ ಎಲ್ಲರೂ ಒಂದೆಡೆ ಸೇರಿ ದೇಗುಲದಲ್ಲಿಯೇ ಆಚರಿಸುವುದು ಇಲ್ಲಿನ ವಿಶೇಷತೆಯಾಗಿದೆ.
ಇನ್ನು ಹಬ್ಬದ ಆಚರಣೆ ಹೇಗಿರಲಿದೆ ಎನ್ನುವುದನ್ನು ನೋಡುವುದಾದರೆ ಗ್ರಾಮದ ದೊಡ್ಡಕೆರೆ ಯಮುನಾ ತಡಿಯಲ್ಲಿ ಹಬ್ಬಕ್ಕೂ ಮೊದಲು ಮರಳಿನ ಗೌರಿಯನ್ನು ಸಿದ್ದಗೊಳಿಸಿ ನಂತರ ಹಬ್ಬದ ದಿನ ವಿಶೇಷ ಪೂಜೆಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಗೌರಿಯನ್ನ ಪ್ರತಿಷ್ಠಾಪಿಸಲಾಗುತ್ತದೆ. ದೇವಾಲಯದಲ್ಲಿ ಐದನೇ ದಿನಕ್ಕೆ ಮರಳಿನ ಗೌರಿಯನ್ನ ಬದಲಿಸಿ ಕಡಲೆ ಹಿಟ್ಟಿನ ಗೌರಿಯನ್ನು ಪ್ರತಿಷ್ಠಾಪಿಸಿ ಅದಕ್ಕೆ ಚಿನ್ನದ ಕವಚ ಆಭರಣ ಹಾಕಲಾಗುತ್ತದೆ.

ದೇವಾಲಯದಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿದಾಗಿನಿಂದ 12 ದಿನಗಳ ಕಾಲ ಪ್ರತಿನಿತ್ಯ ಪೂಜೆ ನಡೆಯುತ್ತದೆ. ಪ್ರಾರಂಭ ದಿನದಲ್ಲಿ ನವದಂಪತಿಗಳು ಬಾಗಿನ ಅರ್ಪಿಸುತ್ತಾರೆ. ಮಕ್ಕಳಿಲ್ಲದವರು ಸಂತಾನ ಭಾಗ್ಯಕ್ಕಾಗಿ ಚಿನ್ನ, ಬೆಳ್ಳಿಯ ತೊಟ್ಟಿಲು ಸಮರ್ಪಣೆ ಮಡುತ್ತಾರೆ. ಯುವತಿಯರು ಕಂಕಣ ಭಾಗ್ಯಕ್ಕಾಗಿ ಮಾಂಗಲ್ಯವನ್ನು ದೇವರಿಗೆ ಅರ್ಪಣೆ ಮಾಡುತ್ತಾರೆ. ಅಷ್ಟೇ ಅಲ್ಲ ದೀಪೋತ್ಸವ, ದೀಪಾರಾಧನೆ ಸೇರಿದಂತೆ ಇಷ್ಟಾರ್ಥ ಸಿದ್ದಿಗಾಗಿ ನಾನಾ ಹರಕೆಗಳನ್ನು ಹರಿಸಿಕೊಂಡ ಭಕ್ತರು ಸಲ್ಲಿಸಿ ದೇವರನ್ನು ಪ್ರಾರ್ಥಿಸುತ್ತಾರೆ.
ಮೊದಲಿಗೆ ಗೌರಿಗೆ ಕಡಲೆ ಹಿಟ್ಟಿನ ಗೌರಮ್ಮ ಎನ್ನುತ್ತಿದ್ದ ಜನತೆ ತದ ನಂತರ ಊರ ಹಬ್ಬವಾಗಿ ಆಚರಿಸಲು ವಿಗ್ರಹಕ್ಕೆ ಚಿನ್ನದ ಕವಚ, ಆಭರಣ ತೊಡಿಸಿದರು ಅಂದಿನಿಂದ ಇದು ಸ್ವರ್ಣ ಗೌರಮ್ಮನಾಗಿ ಭಕ್ತರ ನ್ನು ಸೆಳೆಯುತ್ತಿದ್ದಾಳೆ.