ಮಡಿಕೇರಿ: ಕೊಡಗಿನ ಕೋಟೆ ಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಕಾರಣ ಈ ಬೆಟ್ಟದಲ್ಲಿ ಕುರುಂಜಿ ಮತ್ತೆ ಹೂಬಿಟ್ಟಿದೆ. ಇದು ನೀಲಿ ಸುಂದರಿಯಾಗಿ ಕಣ್ಮನ ಸೆಳೆಯುತ್ತಿದೆ.

ಮಡಿಕೇರಿ ಸಮೀಪ ಇರುವ ಮಾಂದಾಲಪಟ್ಟಿ ಬೆಟ್ಟಶ್ರೇಣಿಯಲ್ಲಿರುವ ಕೋಟೆ ಬೆಟ್ಟವು ಕುರುಂಜಿ ಗಿಡಗಳಿಂದ ಆವೃತವಾಗಿದ್ದು, ಇದುವರೆಗೆ ಹಸಿರಾಗಿದ್ದ ಗಿಡಗಳು ಹನ್ನೆರಡು ವರ್ಷದ ಬಳಿಕ ನೀಲಿ ಹೂಗಳನ್ನು ಬಿಟ್ಟಿರುವ ಕಾರಣದಿಂದ ಇಡೀ ಬೆಟ್ಟ ನೀಲಿಯಾಗಿ ಕಾಣುತ್ತಿದ್ದು, ನೋಡುಗರ ಕಣ್ಣಿಗೆ ರಸದೌತಣ ನೀಡಿದೆ.

ಸುಮಾರು ಹನ್ನೆರಡು ವರ್ಷಗಳ ಬಳಿಕ ಈ ಸುಂದರ ದೃಶ್ಯ ನೋಡಲು ಜನರಿಗೆ ಸಿಲುಕಿರುವುದರಿಂದ ನೋಡಲು ಮುಗಿಬೀಳುತ್ತಿದ್ದಾರೆ. ಇದು ಕೊಡಗಿನ ಸೌಂದರ್ಯವನ್ನು ಇಮ್ಮಡಿಯಾಗಿಸಿದೆ.

ಕೊರೊನಾ ಇಲ್ಲದೆ ಹೋಗಿದ್ದರೆ ಈ ಸುಂದರ ದೃಶ್ಯವನ್ನು ನೋಡಲು ಪ್ರವಾಸಿಗರು ನೂಕು ನುಗ್ಗಲಿರುತ್ತಿತ್ತು. ಆದರೆ ಈಗ ಸ್ಥಳೀಯರು ಸೇರಿದಂತೆ ಒಂದಷ್ಟು ಮಂದಿ ಬಿಟ್ಟರೆ ಹೆಚ್ಚಿನವರು ಬರುತ್ತಿಲ್ಲ. ಸಾಮಾನ್ಯವಾಗಿ ಬೆಟ್ಟಗಳು ಕುರುಚಲು ಕಾಡು, ಮರಗಿಡಗಳಿಂದ ಕೂಡಿವೆ. ಇವುಗಳ ನಡುವೆ ಕೆಲವೇ ಕೆಲವು ಬೆಟ್ಟಗಳು ಮಾತ್ರ ಕುರುಂಜಿ ಗಿಡಗಳಿಂದ ಆವೃತವಾಗಿವೆ. ಅದರಲ್ಲಿ ಕೋಟೆ ಬೆಟ್ಟವೂ ಸೇರಿದೆ.

ಕುರುಂಜಿ ಹೂ ಬಿಟ್ಟಿರುವ ಬೆಟ್ಟಕ್ಕೊಮ್ಮೆ ಭೇಟಿ ನೀಡಿದರೆ ಕಣ್ಣು ಹಾಯಿಸಿದುದ್ದಕ್ಕೂ ನೀಲಮಯವಾಗಿ ಕಾಣುತ್ತಿರುವ ಬೆಟ್ಟ.. ಅದರ ಮೇಲೆ ಪರದೆ ಕಟ್ಟಿದಂತೆ ಕಾಣುವ ಮಂಜು.. ಕಣ್ಮನ ಸೆಳೆಯುತ್ತದೆ. ಯಾವಾಗ ಕುರುಂಜಿ ಹೂ ಬಿಟ್ಟಿದೆ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಜತೆಗೆ ಸಮಸ್ಯೆ ಹೆಚ್ಚಾಗಿದೆ. ಬರುವವರು ಜತೆಯಲ್ಲಿ ಕಸವನ್ನು ತರುತ್ತಿರುವುದರಿಂದ ಪರಿಸರಕ್ಕೆ ಧಕ್ಕೆಯಾಗುತ್ತಿದೆ ಎಂಬ ಆರೋಪವೂ ಇದೆ. ಆದುದರಿಂದ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಎಚ್ಚೆತ್ತುಕೊಂಡು ಪರಿಸರ ಕಾಪಾಡುವ ಕೆಲಸ ಮಾಡಲಿ ಎನ್ನುವುದು ಪರಿಸರ ಪ್ರೇಮಿಗಳ ಆಗ್ರಹವಾಗಿದೆ.