ನಂಜನಗೂಡಿನ ಮನೆಯೊಂದರ ಮೇಲೆ ಮಂಗಳೂರು ಪೊಲೀಸರ ದಾಳಿ : ಬಿಷಪ್ ಹೆಸರಿನ ನಕಲಿ ಲೆಟರ್ ಹೆಡ್, ಸೀಲು ವಶ

ಮೈಸೂರು : ಬೆಳ್ಳಂ ಬೆಳಗ್ಗೆ ಮಂಗಳೂರಿನ ಪೊಲೀಸರು ನಂಜನಗೂಡಿನ ಮನೆಯೊಂದರ ಮೇಲೆ ದಾಳಿ ನಡೆಸಿ ಮಂಗಳೂರು ಸಿಎಸ್‍ಐ ಸದರನ್ ಡಯಾಸೀಸ್ ಬಿಷಪ್ ಹೆಸರಲ್ಲಿ ಸೃಷ್ಟಿಸಿದ್ದಾರೆ ಎನ್ನಲಾದ ನಕಲಿ ಲೆಟರ್‍ಹೆಡ್ ಮತ್ತು ಸೀಲನ್ನು ವಶಕ್ಕೆ ಪಡೆದಿದ್ದಾರೆ.
ಪಟ್ಟಣದ ರಾಮಸ್ವಾಮಿ ಬಡಾವಣೆ, ಜ್ಞಾನಮಾರ್ಗ 4ನೇ ಕ್ರಾಸ್‍ನಲ್ಲಿರುವ ಸಮೃದ್ಧಿ ನಿಲಯದ ಮಾಲೀಕರಾದ ಆಗಸ್ಟಿನ್ ಸಾಲಿನ್ಸ್ ಅವರ ಮನೆಯ ಮೇಲೆಯೇ ದಾಳಿ ನಡೆದಿದ್ದು, ದಾಳಿ ಸಂದರ್ಭದಲ್ಲಿ ಪೊಲೀಸರು ಮನೆಯಲ್ಲಿದ್ದ ಅಗಸ್ಟಿನ್ ಸಾಲಿನ್ಸ್ ಅವರಿಗೆ ನ್ಯಾಯಾಲಯದ ಸರ್ಚ್ ವಾರಂಟ್ ತೋರಿಸಿ ಮನೆಯಲ್ಲಿ ಶೋಧ ಕಾರ್ಯ ನಡೆಸಿದರು. ಈ ವೇಳೆ ಮನೆಯ ಎಲ್ಲ ಬೀರುಗಳು, ಕಪಾಟು, ಮೂಲೆ ಮೂಲೆಗಳಲ್ಲಿ ಶೋಧ ಕಾರ್ಯ ನಡೆಸಲಾಯಿತು. ಕೊನೆಗೆ ಆಗಸ್ಟಿನ್ ಸಾಲಿನ್ಸ್ ಅವರ ಅಡುಗೆ ಮನೆಯ ಡೈನಿಂಗ್ ಡೇಬಲ್ ಬಳಿ ಮಂಗಳೂರು ಸಿಎಸ್‍ಐ ಸದರನ್ ಡಯಾಸೀಸ್ ಬಿಷಪ್ ಹೆಸರಿನಲ್ಲಿದ್ದ ಹಲವು ಖಾಲಿ ಲೆಟರ್‍ಹೆಡ್‍ಗಳು ಮತ್ತು ಒಂದು ಸೀಲು ಪತ್ತೆಯಾಗಿದ್ದು, ಪೊಲೀಸರು ಅವುಗಳನ್ನು ವಶಕ್ಕೆ ಪಡೆದು ಪಂಚನಾಮೆ ನಡೆಸಿ ಆರೋಪಿ ಅಗಸ್ಟಿನ್ ಸಾಲಿನ್ಸ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ತಿಳಿವಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಪ್ರಕರಣ ಬಯಲಿಗೆ ಬಂದ್ದದ್ದು ಹೇಗೆ?


ಮೈಸೂರಿನಲ್ಲಿರುವ ಸಿಎಸ್‍ಐ ವೆಸ್ಲಿ ದೇವಾಲಯದ ರೆವರೆಂಡ್ ಎಲೀಷ್ ಕುಮಾರ್ ಎಂಬವರಿಗೆ ಮೈಸೂರು
ವಿಕ್ಟೋರಿಯ ಶಾಲಾ ಕಟ್ಟಡದ ಸ್ಥಳದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೊಸ ಯೋಜನೆ ಮಾಡಲು ಅನುಮತಿ ನೀಡಿರುವುದಾಗಿ ದಿನಾಂಕ 15-06-2024 ರಂದು ಮಂಗಳೂರಿನ ಬಿಷಪ್ ಹೇಮಚಂದ್ರ ಕುಮಾರ್ ಅವರ ಹೆಸರಿನಲ್ಲಿ ನಕಲಿ ಲೆಟರ್‍ಹೆಡ್, ಸೀಲು ಮತ್ತು ಪೋರ್ಜರಿ ಸಹಿ ಮಾಡಿದ ಪತ್ರವನ್ನು ಮೈಸೂರಿನಲ್ಲಿರುವ ಸಿ.ಎಸ್.ಐ ಮಂಬರ್ ಹಾಗೂ ಕೌನ್ಸಿಲ್ ಸದಸ್ಯ ಆಗಿರುವ ಈವನ್ ತೇಜಾ ಎಂಬವರಿಗೆ ದಿನಾಂಕ 25-07-2024 ರಂದು ಅಂಚೆ ಮೂಲಕ ತಲುಪಿಸಲಾಗಿತ್ತು. ಈ ವಿಷಯವನ್ನು ಬಿಷಪ್ ಹೇಮಚಂದ್ರ ಕುಮಾರ್ ಅವರಿಗೆ ತಿಳಿಸಿದಾಗ, ಪತ್ರವನ್ನು ಪರಿಶೀಲಿಸಿದ ಅವರು ಈ ಪತ್ರ ನಕಲಿ ಎಂದು ದೃಢವಾಗಿ ಇದನ್ನು ನಂಜನಗೂಡಿನಲ್ಲಿರುವ ಆಗಸ್ಟಿನ್ ಸಾಲಿನ್ಸ್ ಮತ್ತು ಪುತ್ತೂರಿನ ನವೀನ್ ಪೀಟರ್ ಎಂಬವರು ಸೇರಿ ನಕಲಿ ಪತ್ರ ಸೃಷ್ಟಿಸಿ ಪೋರ್ಜರಿ ಸಹಿ ಮಾಡಿರುವುದು ಗೊತ್ತಾಗಿ ಅವರ ವಿರುದ್ಧ ಮಂಗಳೂರಿನ ಕದ್ರಿ ಪೂರ್ವ ಪೊಲೀಸ್ ಠಾಣೆಯಲ್ಲಿ ದಿನಾಂಕ: 14-08-2024 ರಂದು ದೂರು ದಾಖಲಿಸಿದ್ದರು. ಪ್ರಕರಣ ಸಂಖ್ಯೆ : 123/ 2024ರ ಸಂಬಂಧ ಮಂಗಳೂರು ಎರಡನೇ ಅಡಿಷನಲ್ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಸಿಜೆಎಂ ನ್ಯಾಯಾಲಯದಿಂದ ಸರ್ಚ್ ವಾರಂಟ್ ಹೊರಡಿಸಲಾಗಿತ್ತು.
ಯಾರು ಈ ಅಗಸ್ಟಿನ್ ಸಾಲೀನ್ಸ್
ಅಗಸ್ಟಿನ್ ಸಾಲೀನ್ಸ್ ಅವರು, ಪ್ಯಾಸ್ಟರೇಟ್ ಸಮಿತಿಯ ಸದಸ್ಯರು, ಡಯಾಸೀಸ್ ಕೌನ್ಸಿಲ್ ಸದಸ್ಯರು ಮತ್ತು ಏರಿಯಾ ಕೌನ್ಸಿಲ್ ಕಾರ್ಯದರ್ಶಿಯೂ ಆಗಿದ್ದು, ಅವರು ಈ ಹಿಂದೆಯೂ ಇಂತಹ ಪೋರ್ಜರಿ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇತ್ತೀಚೆಗೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾದ ಹಿನ್ನೆಲೆ ಅವರನ್ನು ಪ್ಯಾಸ್ಟರೇಟ್ ಸಮಿತಿಯ ಸದಸ್ಯತ್ವ, ಡಯಾಸೀಸ್ ಕೌನ್ಸಿಲ್ ಸದಸ್ಯತ್ವ ಮತ್ತು ಏರಿಯಾ ಕೌನ್ಸಿಲ್ ಕಾರ್ಯದರ್ಶಿ ಸ್ಥಾನದಿಂದ ವಜಾ ಮಾಡಲಾಗಿದೆ ಎಂದೂ ಸಹ ಮಂಗಳೂರು ಸಿಎಸ್‍ಐ ಸದರನ್ ಡಯಾಸೀಸ್ ಬಿಷಪ್ ಹೇಮಚಂದ್ರ ಕುಮಾರ್ ಅವರು ಮೈಸೂರು ಏರಿಯಾ ಕೌನ್ಸಿಲ್ ಮುಖ್ಯಸ್ಥರಾದ ಎಲಿಷ್ ಕುಮಾರ್ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.