ಮಡಿಕೇರಿ: ಸಾಹಿತ್ಯ ಲೋಕದಲ್ಲಿ ವಿರಳ ಎಂಬಂತೆ, ಒಂದೇ ಕುಟುಂಬದ, ಮೂರು ತಲೆಮಾರಿನ ಮೂವರು ಬರೆದ ಪುಸ್ತಕಗಳು, ಒಂದೇ ವೇದಿಕೆಯಲ್ಲಿ ಮಡಿಕೇರಿಯಲ್ಲಿ ಬಿಡುಗಡೆ ಆಗಲಿದೆ.
‘ಶಕ್ತಿ’ಯ ಸ್ಥಾಪಕ ಸಂಪಾದಕ, ಕವಿ, ಸಂಗೀತಗಾರ, ಸಾಹಿತಿ ದಿ. ಬಿ.ಎಸ್. ಗೋಪಾಲ ಕೃಷ್ಣ ಅವರು ಬರೆದು, ಮುದ್ರಣ ಆಗದೆ ಉಳಿದಿದ್ದ, ಆಂಗ್ಲ ಪುಸ್ತಕ ’ದ ವರ್ಲ್ಡ್ ಈಸ್ ಎ ನಾಟ್, ವಿಶ್ವ ಶೂನ್ಯ ಎಂಬ ಅದ್ವೈತ ಆಧಾರಿತ ಪುಸ್ತಕ ಬಿಡುಗಡೆ ಆಗಲಿದೆ.
ಶೃಂಗೇರಿ ಮಠ ಹಾಗೂ ಶ್ರೀ ರಾಮಕೃಷ್ಣ ಆಶ್ರಮದ ಮುಖ್ಯಸ್ಥರು ಈ ಪುಸ್ತಕವನ್ನು ಮೆಚ್ಚಿದ್ದು, ಮೊಣ್ಣಂಡ ಶೋಭಾ ಸುಬ್ಬಯ್ಯ ಹಿಂಬರಹ ಬರೆದಿದ್ದಾರೆ. ಶ್ರೀಮತಿ ಪುಷ್ಪಾ ದೇವಯ್ಯ ಮುನ್ನುಡಿ ಬರೆದಿದ್ದಾರೆ.
ಇರುವ ಸತ್ಯ ಒಂದು ಮಾತ್ರ, ಮಿಕ್ಕಿದ್ದೆಲ್ಲ ಭ್ರಮೆ, ಮಾಯೆ ಎಂದು ಪ್ರತಿಪಾದಿಸಿರುವ ಬಿ.ಎಸ್. ಗೋಪಾಲಕೃಷ್ಣ ಅವರು, ತಮ್ಮ ಬರಹದಲ್ಲಿ ಗೌಡಪಾದಾಚಾರ್ಯರ ಕರಿಕ, ಶಂಕರಾಚಾರ್ಯರ ಮಂಡೂಕ್ಯೋಪನಿಷತ್ ಇತ್ಯಾದಿ ಮೌಲ್ಯಯುತ ಬರಹಗಳನ್ನು ಉಲ್ಲೇಖಿಸಿದ್ದಾರೆ.
ಗೋಪಾಲಕೃಷ್ಣ ಅವರ ಪುತ್ರ, ಬಿ.ಜಿ. ಅನಂತ ಶಯನ ಅವರು ಬರೆದಿರುವ ’ಹಾಕು ಮತ್ತು ಕವನಸಂಗಮ’ ಪುಸ್ತಕ ಬರಹ ಒಂದು ಪ್ರಯೋಗ. ಹಾಕು ಅಂದರೆ, ಹದಿನೇಳು ಅಕ್ಷರ, ಮೂರು ಸಾಲುಗಳಲ್ಲಿ ವಿಚಾರ ಹುದುಗಿಸಿ, ಆಸಕ್ತಿ ಬರಿಸುವ, ಸಂದೇಶ ಸಾರುವದು. ಇನ್ನೂರಕ್ಕೂ ಹೆಚ್ಚು ಹಾಕುಗಳು, ಕನ್ನಡ ಮತ್ತು ಇಂಗ್ಲೀಷ್ ಕವನಗಳು ಇದರಲ್ಲಿವೆ. ಹಾಕು ಕೃತಿ ಹೊರಬರುತ್ತಿರುವದು ಕೊಡಗಿನಲ್ಲಿ ಇದೇ ಪ್ರಥಮ. ಈ ಪುಸ್ತಕದಲ್ಲೂ ಹೆಚ್ಚಿನ ಭಾಗ ಮೀಸಲಾಗಿರುವದು ಅಧ್ಯಾತ್ಮಿಕಕ್ಕೆ. ಇದಕ್ಕೆ ಮುನ್ನುಡಿಯನ್ನು ಧಾರವಾಡ ವಿಶ್ವ ವಿದ್ಯಾಲಯದ ಪ್ರೇಮಾ ಹೂಗಾರ ಅವರು ಬರೆದಿದ್ದು, ಬೆನ್ನುಡಿಯನ್ನು ಖ್ಯಾತ ಬರಹಗಾರ್ತಿ ಡಾ. ರೇಖಾ ವಸಂತ್ ಬರೆದಿದ್ದಾರೆ.
ಈಗಷ್ಟೇ ಹದಿನೆಂಟು ದಾಟುತ್ತಿರುವ ಕು. ಅಂಜಲಿ ಅನಂತ ಶಯನ ಆಂಗ್ಲ ಭಾಷೆಯಲ್ಲಿ ನೂರಕ್ಕೂ ಅಧಿಕ ಪ್ರೌಢ ಕವನ ಬರೆದಿದ್ದಾಳೆ. ಇದಕ್ಕೆ ಮುನ್ನುಡಿ ಬರೆದಿರುವ ಡಾ. ಎ.ಎಸ್. ಪೂವಮ್ಮ, ಬೆನ್ನುಡಿ ಬರೆದಿರುವ ಕಾರ್ಕಳ ನಿಟ್ಟೆ ಸಮೂಹದ ಡಾ. ಆಶಾಲತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಿರಿಯ ವಯಸ್ಸಿನಲ್ಲೇ ಅಂಜಲಿ ವಿಶ್ವವನ್ನು ಗಮನಿಸುವ ನೋಟ, ಭಾಷೆಯ ಹಿಡಿತ, ಅಧ್ಯಾತ್ಮಿಕ ಮಿಡಿತ ಕವನಗಳನ್ನು ಮೌಲ್ಯಯುತವಾಗಿ ಮಾಡಿವೆ ಎಂದಿದ್ದಾರೆ.
ಆ.9 ರಂದು ಪುಸ್ತಕಗಳನ್ನು ದಂತ ವೈದ್ಯ ಡಾ. ಅನಿಲ್ ಚೆಂಗಪ್ಪ, ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ವೀರಾಜಪೇಟೆ ಕಾವೇರಿ ಕಾಲೇಜಿನ ಪ್ರಾಂಶುಪಾಲೆ ಡಾ. ಎ.ಎಸ್. ಪೂವಮ್ಮ ಬಿಡುಗಡೆ ಮಾಡಲಿದ್ದಾರೆ.
ಶ್ರೀಮತಿ ರಾಜಲಕ್ಷ್ಮಿ ಗೋಪಾಲ ಕೃಷ್ಣ ದೀಪ ಬೆಳಗಲಿದ್ದಾರೆ. ಶ್ರೀಮತಿ ಶೋಭಾ ಸುಬ್ಬಯ್ಯ, ಡಾ. ರೇಖಾ ವಸಂತ್, ಶ್ರೀಮತಿ ರೇಖಾ ಕಾರ್ಯಪ್ಪ, ಕೆ.ಎಂ. ಕರುಂಬಯ್ಯ, ಡಾ. ಆಶಾಲತಾ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ‘ಶಕ್ತಿ’ಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪಾದಕ ಜಿ. ಚಿದ್ವಿಲಾಸ್ ಅವರು ಹಾಜರಿರುತ್ತಾರೆ.