ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2021ರ ಅಂಗವಾಗಿ ಜಂಬೂಸವಾರಿಯಲ್ಲಿ ಭಾಗವಹಿಸಲಿರುವ ಗಜಪಡೆಯ ಗಜಪಯಣಕ್ಕೆ ನಾಗರಹೊಳೆಯ ವೀರನಹೊಸಹಳ್ಳಿಯ ಗೇಟ್ ನಲ್ಲಿ ಚಾಲನೆ ನೀಡಲಾಯಿತು.

ಅಭಿಮನ್ಯು ನೇತೃತ್ವದ ಎಂಟು ಗಜಗಳನ್ನೊಳಗೊಂಡ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ ನೀಡುವುದರೊಂದಿಗೆ ನೆರೆದಿದ್ದ ಅತಿಥಿಗಳು ವಿಶೇಷ ಪೂಜೆ ಸಲ್ಲಿಸಿ, ಬೇವು ಬೆಲ್ಲ ತಿನ್ನಿಸಿ ಸಂಸದ ಪ್ರತಾಪ್ ಸಿಂಹ, ಶಾಸಕ ಎಚ್.ಪಿ ಮಂಜುನಾಥ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಎಸ್ಪಿ ಆರ್.ಚೇತನ್, ಮೇಯರ್ ಸುನಂದಾ ಪಾಲನೇತ್ರ, ಡಿಸಿಎಫ್ ಕರಿಕಾಳನ್, ವಿವಿಧ ನಿಗಮ ಮಂಡಲಿಗಳ ಅಧ್ಯಕ್ಷರು ಶುಭ ಕೋರಿದರು.

ಅಭಿಮನ್ಯು ನೇತೃತ್ವದಲ್ಲಿ ಗೋಪಾಲಸ್ವಾಮಿ, ಅಶ್ವತ್ಥಾಮ, ಕಾವೇರಿ, ವಿಕ್ರಮ, ಧನಂಜಯ, ಚೈತ್ರಾ, ಲಕ್ಷ್ಮೀ ಆನೆಗಳು ಸಿಂಗಾರಗೊಂಡು ಮೈಸೂರು ದಸರಾಕ್ಕೆ ಹೊರಟ ಸಂಭ್ರಮದಲ್ಲಿದ್ದರೆ, ಮಾವುತರು ಮತ್ತು ಕಾವಾಡಿಗಳು ಪೋಷಾಕು ಧರಿಸಿ ಗಮನಸೆಳೆದರು.

ವೀರನಹೊಸಹಳ್ಳಿಯಿಂದ ಸಾಂಪ್ರದಾಯಿಕ ಸ್ವಾಗತನೀಡಿ ಗಜಪಯಣಕ್ಕೆ ಚಾಲನೆ ನೀಡಿದ ಬಳಿಕ ಮೈಸೂರಿಗೆ ಲಾರಿಯಲ್ಲಿ ಕರೆತರಲಾಗುತ್ತಿದ್ದು, ಮೈಸೂರು ನಗರದ ಅಶೋಕಪುರಂನಲ್ಲಿರುವ ಅರಣ್ಯಭವನದಲ್ಲಿ ವಾಸ್ತವ್ಯ ಹೂಡಲಿವೆ.
ಸೆ.16ರಂದು ಅರಣ್ಯ ಭವನದಲ್ಲಿ ಅರಣ್ಯ ಇಲಾಖೆ ವತಿಯಿಂದ ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಮೆರವಣಿಗೆಯಲ್ಲಿ ಅರಮನೆಗೆ ಕರೆತರಲಾಗುತ್ತದೆ. ಈ ವೇಳೆ ಮತ್ತೆ ಗಜಪಡೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅರಮನೆ ಆವರಣಕ್ಕೆ ಸ್ವಾಗತಿಸಲಾಗುತ್ತದೆ. ಬಳಿಕ ದಸರಾ ಜಂಬೂಸವಾರಿಗೆ ಗಜಪಡೆಯನ್ನು ಸಜ್ಜುಗೊಳಿಸುವ ಕಾರ್ಯವಾದ ತಾಲೀಮು ನಡೆಯಲಿವೆ. ಕೊರೊನಾ ಕಾರಣದಿಂದ ಎಲ್ಲ ಕಾರ್ಯಕ್ರಮಗಳನ್ನು ಸರಳಗೊಳಿಸಲಾಗಿದೆ.
