ಮೈಸೂರಿನ ಚಾಮುಂಡಿ ಬೆಟ್ಟದ ಸನ್ನಿಧಾನದಲ್ಲಿ ನಾಡದೇವತೆಗೆ ನಿತ್ಯವೂ ಸಲ್ಲುತ್ತೇ ಪೊಲೀಸ್ ಸೆಲ್ಯೂಟ್..!

ಮೈಸೂರು: ದೇಶದಲ್ಲೇ ಪೊಲೀಸರಿಂದ ಸೆಲ್ಯೂಟ್(ವಂದನೆ) ಸ್ವೀಕರಿಸುವ ದೇಶದ ಏಕೈಕ, ಅಪರೂಪದ ಪದ್ಧತಿ ಮೈಸೂರಿನ ಚಾಮುಂಡಿ ಬೆಟ್ಟದ ಸನ್ನಿಧಾನದಲ್ಲಿ ರೂಢಿಯಲ್ಲಿರುವುದು ಚಾಮುಂಡೇಶ್ವರಿಯ ವಿಶೇಷ ವೈಭವವನ್ನು ತಿಳಿಸಿಕೊಡುತ್ತದೆ.

ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಾಲಯವನ್ನು ಮೈಸೂರಿನ ಮಹಾರಾಜರು ನಿರ್ಮಿಸಿದ್ದು, ಚಾಮುಂಡೇಶ್ವರಿ ಮಹಾರಾಜರ ಮನೆದೇವರು ಕೂಡಾ ಹೌದು. ನೂರಾರು ವರ್ಷಗಳ ಹಿಂದೆ ಚಾಮುಂಡಿ ತಾಯಿ ದರ್ಶನಕ್ಕೆ ಬರುವ ಮಹಾರಾಜರ ಪೂಜೆ ವೇಳೆ ಸಿಪಾಯಿಗಳು ಸೆಲ್ಯೂಟ್ ಸಲ್ಲಿಸಿ ಗೌರವ ಅರ್ಪಿಸುತ್ತಿದ್ದರು. ಆ ನಂತರ ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದ ಬಳಿಕ ಪೊಲೀಸರು ಸಿಪಾಯಿಗಳ ವಂದನೆಯನ್ನು ಮುಂದುವರೆಸಿಕೊಂಡು ಬಂದಿರುವುದು ವಿಶೇಷ. 

ಹಿಂದೆ ಮಹಾರಾಜರಿಗೆ ಸಲ್ಲುತ್ತಿದ್ದ ಸೆಲ್ಯೂಟ್ ಗೌರವ ವಂದನೆ ಈಗ ನಿತ್ಯವೂ ಶ್ರೀ ಚಾಮುಂಡೇಶ್ವರಿಗೆ ಸಲ್ಲುತ್ತಿದೆ. ವರ್ಷದ ೩೬೫ ದಿನವೂ ಸಹ ನಿತ್ಯವೂ ಪೊಲೀಸರಿಂದ ವಂದನೆ ಸ್ವೀಕರಿಸುವ ಏಕೈಕ ದೇವರು ವಿಶೇಷತೆಯೂ ಚಾಮುಂಡೇಶ್ವರಿ ದೇವಾಲಯದಲ್ಲಿದೆ. ಬೆಳಗ್ಗೆ ೯.೩೦ ಹಾಗೂ ರಾತ್ರಿ ೮.೩೦ಕ್ಕೆ ನಿತ್ಯವೂ ಮಹಾ ಮಂಗಳಾರತಿಯನ್ನು ಚಾಮುಂಡೇಶ್ವರಿಗೆ ನೇರವೇರಿಸಲಾಗುತ್ತದೆ. ಈ ಸಂದರ್ಭದಲ್ಲಿ ಉಪಸ್ಥಿತರಿರುವ ಕೆ.ಆರ್.ಠಾಣೆಯ ಪೊಲೀಸ್ ಸಿಬ್ಬಂದಿ ದೇವಾಲಯದ ಒಳ ಆವರಣಕ್ಕೆ ಆಗಮಿಸಿ ತಮ್ಮ ಕೋವಿ ಬಂದುಕೂ ಹಿಡಿದು ವಂದನೆ ಸಲ್ಲಿಸುವ ಮೂಲಕ ಗೌರವ ಸಮರ್ಪಿಸುತ್ತಾರೆ.

ಪೊಲೀಸರೆಂದರೆ ಹಿರಿಯ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ನ್ಯಾಯಾಧೀಶರಿಗಷ್ಟೇ ನಮನ ಸಲ್ಲಿಸುವ ಈ ಕಾಲದಲ್ಲಿ ಅತ್ಯಂತ ಶ್ರದ್ಧಾ ಪೂರಕವಾಗಿ ಪ್ರತಿನಿತ್ಯವೂ ಚಾಮುಂಡೇಶ್ವರಿಗೆ ಗೌರವ ಸಲ್ಲಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿರುವುದು ಚಾಮುಂಡೇಶ್ವರಿಯ ವಿಶೇಷವಾಗಿದೆ. ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದ ಈ ಸಂದರ್ಭದಲ್ಲಿ ಇಂತಹದೊಂದು ವಿಭಿನ್ನ ವಂಧನೆ ಇತಿಹಾಸ ಎಲ್ಲರ ಗಮನ ಸೆಳೆಯಲಿದೆ. 

ಮೂರು ದಿನ ಪ್ರವೇಶ ನಿಷೇಧ

ಚಾಮುಂಡೇಶ್ವರಿಯ ವರ್ಧಂತಿ ಮಹೋತ್ಸವ ಇಂದು ಎಲ್ಲೆಡೆ ನಡೆಯಲಿದ್ದು, ಕೊರೊನಾ ಹಿನ್ನೆಲೆಯಲ್ಲಿ ಇಂದು, ನಾಳೆ ಹಾಗೂ ಭಾನುವಾರದವರೆಗೂ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಕೊರೊನಾ ಇಲ್ಲದಿದ್ದರೆ ಲಕ್ಷಾಂತರ ಭಕ್ತರು ಚಾಮುಂಡೇಶ್ವರಿಯ ದರ್ಶನ ಪಡೆಯುತ್ತಿದ್ದು ಈ ದಿನ ವಿಶೇಷ. 

ಹಿಂದೆ ಮಹಾರಾಜರ ಕಾಲದಿಂದಲೂ ಚಾಮುಂಡೇಶ್ವರಿಗೆ ಸಿಪಾಯಿಗಳು ಹಾಗೂ ಅನಂತರ ಪೊಲೀಸರಿಂದ ವಂದನೆ ಸಲ್ಲಿಸುವ ಪದ್ಧತಿ ಸಂಪ್ರದಾಯ ಬದ್ಧವಾಗಿ ಬಂದಿದೆ. ಈ ಹಿನ್ನೆಲೆಯಲ್ಲಿ ವರ್ಷದಲ್ಲಿ ನಿತ್ಯವೂ ಚಾಮುಂಡೇಶ್ವರಿಗೆ ಪೊಲೀಸ್ ಇಲಾಖೆ ವಂದನೆ ಸಲ್ಲಿಸುತ್ತಾ ಬರುತ್ತಿದ್ದಾರೆ. ನಮ್ಮ ಗಮನಕ್ಕೆ ಬಂದ ರೀತಿಯಲ್ಲಿ ದೇಶದಲ್ಲಿ ಯಾವ ದೇವಾಲಯದಲ್ಲಿಯೂ ಪೊಲೀಸರಿಂದ ವಂದನೆ ಸ್ವೀಕರಿಸುವ ಏಕೈಕ ಶಕ್ತಿ ದೇವತೆ ಮೈಸೂರಿನ ಚಾಮುಂಡೇಶ್ವರಿ ಎಂಬುದು ಎಲ್ಲರ ಹೆಮ್ಮಯಾಗಿದೆ. 

ಶಶಿಶೇಖರ ದೀಕ್ಷಿತ್, ಪ್ರಧಾನ ಅರ್ಚಕ, ಚಾಮುಂಡಿ ಬೆಟ್ಟ.

ಹಿಂದೆ ಸಿಪಾಯಿಗಳಿಂದ ಸೆಲ್ಯೂಟ್ ಮಾಡಲಾಗುತ್ತಿತ್ತು. ಅದೇ ಪದ್ಧತಿಯಂತೆ ಈಗಲೂ ನಮ್ಮ ಇಲಾಖೆಯಿಂದಲೇ ನಿತ್ಯವೂ ಗೌರವ ವಂದನೆ ಮಾಡಲಾಗುತ್ತಿದೆ. ದೇಶದ ಒಳಿತಿಗಾಗಿ ಆ ಮೂಲಕ ನಡೆಯುವ ಮಹಾಮಂಗಳಾರತಿ ಕಾಲದಲ್ಲಿ ವಂದನೆ ಸಲ್ಲಿಸುತ್ತಾ ಬರಲಾಗಿದೆ. 

ಜಯಕೃಷ್ಣ, ಸಹಾಯಕ ಸಬ್ ಇನ್‌ಸ್ಪೆಕ್ಟರ್, ಕೆ.ಆರ್. ಪೊಲೀಸ್ ಠಾಣೆ.

Leave a Reply

Your email address will not be published. Required fields are marked *