
ಮೈಸೂರು: ನಗರದ ಜಿಲ್ಲಾಧಿಕಾರಿ, ತಾಲ್ಲೂಕು ಕಚೇರಿಯೂ ಸೇರಿ 24ಕಚೇರಿಗಳಿಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್) ಸೋಮವಾರ ಬೆಳ್ಳಂ ಬೆಳ್ಳಿಗೆ ಕರೆಂಟ್ ಕಟ್ ಮಾಡುವ ಮೂಲಕ ಶಾಕ್ ಕೊಟ್ಟಿದೆ.
ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡು ಮನವಿಗೂ ಸ್ಪಂದಿಸದ ಇಲಾಖಾ ಕಚೇರಿಗಳ ಪಟ್ಟಿ ಮಾಡಿಕೊಂಡ ಸೆಸ್ಕಾಂ ಅಧಿಕಾರಿಗಳ ತಂಡ ಸೋಮವಾರ ಜಿಲ್ಲಾಧಿಕಾರಿ ಕಚೇರಿ, ತಾಲ್ಲೂಕು ಕಚೇರಿ, ರಿಜಿಸ್ಟಾರ್ ಕಚೇರಿ ಸೇರಿ 24ಕಚೇರಿಗಳ ವಿದ್ಯುತ್ ಕಡಿತಗೊಳಿಸಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಮಧ್ಯಾಹ್ನದ ವೇಳೆ ಹಣ ಪಾವತಿ ಮಾಡಿದ್ದು, ಬಳಿಕ ಎಂದಿನಂತೆ ವಿದ್ಯುತ್ ನೀಡಲಾಗಿದೆ. ಇನ್ನು ತಾಲ್ಲೂಕು ಕಚೇರಿಯಿಂದಲೂ ಲಕ್ಷಾಂತರ ರೂ. ಬಾಕಿ ಬರಬೇಕಿರುವ ಹಿನ್ನೆಲೆಯಲ್ಲಿ ಇಂದು ಇಡೀ ದಿನ ಕಚೇರಿ ವಿದ್ಯುತ್ ಇಲ್ಲದೆ ನಿರ್ವಹಿಸಿದೆ.
ಈ ಕುರಿತು ಪ್ರತಿಕ್ರಯಿಸಿದ ಸೆಸ್ಕಾಂ ಎಸಿ ನಾಗೇಶ್, ಶಾಲಾ-ಕಾಲೇಜು, ಆಸ್ಪತ್ರೆ, ನ್ಯಾಯಾಲಯ, ಹಾಸ್ಪಿಟೆಲ್, ನೀರಾವರಿ, ಏರ್ಪೋರ್ಟ್‌ಗಳಿಂದಲೂ ಬಾಕಿ ಬರಬೇಕಿದೆ. ಆದರೆ, ಆದ್ಯತೆ ವಲಯ ಎಂಬ ಕಾರಣಕ್ಕೆ ಅವರಿಗೆ ಬಾಕಿ ಪಾವತಿಸುವಂತೆ ಮನವರಿಕೆ ಮಾಡಿಕೊಡುವ ಕೆಲಸ ನಡೆಯುತ್ತಿದೆ. ಇದಾಗಿಯೂ ಬಾಕಿ ಪಾವತಿಸದ 91 ಕಚೇರಿಗಳು ನಗರದಲಿವೆ. ಈ ಪೈಕಿ ಈಗ 24 ಕಚೇರಿಗಳ ವಿದ್ಯುತ್ ಕಡಿತ ಮಾಡಿದ್ದು, ಐದು ಕಚೇರಿಗಳು ಹಣ ಪಾವತಿಸಿವೆ ಎಂದರು.
ಇನ್ನೂ ಉಳಿದವುಗಳಿಂದ ಪತ್ರ ಪಡೆದು ನಾಳೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಬಹುತೇಕರು ನಾಳೆ ಹಣ ಪಾವತಿಸುವ ವಿಶ್ವಾಸವಿದೆ. ಇಲಾಖೆಯ ಮಾರ್ಗಸೂಚಿ ಅನ್ವಯದಂತೆ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆಯಲ್ಲಿರುವ ಹಿನ್ನೆಯಲ್ಲಿ ಈ ನಿರ್ಣಯ ಮಾಡಲಾಗಿದೆ ಎಂದು ತಿಳಿಸಿದರು.
ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಸೆಸ್ಕ್ ಅಧಿಕಾರಿಗಳು ವಿದ್ಯುತ್ ಕಡಿತಗೊಳಿಸಿದ್ದಾರೆ. ನಮ್ಮದೊಂದು ಕಚೇರಿ ಮಾತ್ರವಲ್ಲದೆ, ಹಲವು ಕಚೇರಿಗಳಲ್ಲಿಯೂ ಇದು ನಡೆದಿದ್ದು, ಈ ನಿಟ್ಟಿನಲ್ಲಿ ಚರ್ಚಿಸುವ ಕೆಲಸ ನಡೆಯುತ್ತಿದೆ.
ರಕ್ಷಿತ್, ತಹಿಸೀಲ್ದಾರ್.
ಜನರ ಅಕ್ರೋಶ
ಜಿಲ್ಲಾಧಿಕಾರಿ ಕಚೇರಿಯಲ್ಲಿ ಅರ್ಧ ದಿನ, ತಾಲ್ಲೂಕು ಕಚೇರಿ ಹಾಗೂ ನೊಂದಣಾಧಿಕಾರಿಗಳ ಕಚೇರಿಯಲ್ಲಿ ಇಡೀ ದಿನ ವಿದ್ಯುತ್ ಇಲ್ಲದೆ ಜನರು ಪರದಾಡಿದರು. ಈ ವೇಳೆ ಅನೇಕ ಸಾರ್ವಜನಿಕರು ಆಡಳಿತ ವಿಭಾಗಕ್ಕೆ ಆಕ್ರೋಶ ವ್ಯಕ್ತಪಡಿಸಿದರು.