ರಾಮನಗರ: ಕಳೆದ ನಾಲ್ಕು ದಿನಗಳ ಹಿಂದೆ ತಾಲ್ಲೂಕಿನ ಬಿಡದಿ ಹೋಬಳಿ ಚೌಕಹಳ್ಳಿಯ ವೃಷಭಾವತಿ ನದಿಯಲ್ಲಿ ಬಿದ್ದಿದ್ದ ಯುವಕ ಶವವನ್ನು ಹುಡುಕಿ ತೆಗೆಯುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಬಿಡದಿ ತಾಲೂಕಿನ ಸಿದ್ಧೇಗೌಡನದೊಡ್ಡಿ ಸಮೀಪ ಚೌಕಹಳ್ಳಿ ನಿವಾಸಿ ರವೀಂದ್ರನಾಥ ರೆಡ್ಡಿ ಎಂಬುವರ ಪುತ್ರ ಕೌಶಿಕ್ ರೆಡ್ಡಿ(26) ಎಂಬಾತನೇ ನದಿಗೆ ಬಿದ್ದು ನಾಲ್ಕು ದಿನಗಳ ಬಳಿಕ ಶವವಾಗಿ ಪತ್ತೆಯಾದ ದುರ್ದೈವಿ. ಈತ ಎಂ.ಬಿ.ಎ ಪದವೀಧರನಾಗಿದ್ದು, ಲಂಡನ್‌ನಲ್ಲಿ ಉದ್ಯೋಗಿಯಾಗಿದ್ದನು. ಕೋವಿಡ್ ಕಾರಣ ಇತ್ತೀಚೆಗಷ್ಟೇ ತವರಿಗೆ ವಾಪಸ್ಸಾಗಿದ್ದ, ಕೆಲಸದ ನಿಮಿತ್ತ ಸೋಮವಾರ(ಆ.9) ಹೈದರಾಬಾದ್‌ಗೆ ತೆರಳಬೇಕಾಗಿತ್ತು.
ಆದರೆ ಚೌಕಹಳ್ಳಿ-ಗೋಪಹಳ್ಳಿ ಗ್ರಾಮಗಳ ನಡುವೆ ಹರಿಯುವ ವೃಷಭಾವತಿ ನದಿಗೆ ನಿರ್ಮಿಸಿರುವ ಸಂಪರ್ಕ ಸೇತುವೆ ಬಳಿ ಶನಿವಾರ(ಆ.7) ರಾತ್ರಿ ವಾಕಿಂಗ್ ಗೆ ತೆರಳಿದ ವೇಳೆ ಕೌಶಿಕ್ ರೆಡ್ಡಿ ಆಯತಪ್ಪಿ ನದಿಯಲ್ಲಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದನು. ಮಾರನೆಯ ದಿನ ಮುಂಜಾನೆ ಕಾರ್ಯಾಚರಣೆಗಿಳಿದ ಅಗ್ನಿ ಶಾಮಕ ದಳದ ಸಿಬ್ಬಂದಿ ನಾಲ್ಕು ದಿನಗಳ ನಿರಂತರ ಹುಡುಕಾಟ ನಡೆಸಿದ್ದರು. ಬುಧವಾರ ಕನಕಪುರ ತಾಲೂಕು ಹಾರೋಹಳ್ಳಿ ಹೋಬಳಿಯ ಸಿದ್ದೇಗೌಡನದೊಡ್ಡಿ ಸಮೀಪ ವೃಷಭಾವತಿ ನದಿಯಲ್ಲಿ ಕೌಶಿಕ್ ರೆಡ್ಡಿಯ ಮೃತದೇಹ ಸಿಕ್ಕಿದೆ.

ಈ ಕುರಿತಂತೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಬಿ.ಮಂಜುನಾಥ್ ಅವರು ಸುದ್ಧಿಗಾರರೊಂದಿಗೆ ಮಾತನಾಡಿ, ಕಳೆದ ನಾಲ್ಕು ದಿನಗಳಿಂದ ಯುವಕನಿಗಾಗಿ ಪತ್ತೆ ಕಾರ್ಯ ನಡೆದಿತ್ತು. ಬುಧವಾರ ಬೆಳಿಗ್ಗೆ ಎಂದಿನಂತೆ ಕಾರ್ಯಾಚರಣೆ ಆರಂಭಿಸಿ ಕೊಳ್ಳಿಗನಹಳ್ಳಿ ಮುಖೇನ ನದಿಯ ಉದ್ದಕ್ಕೂ ಹುಡುಕಾಡುತ್ತಿದ್ದಾಗ ಸಿದ್ದೇಗೌಡನದೊಡ್ಡಿ ಬಳಿ ವೃಷಭಾವತಿ ನದಿ ಪಾತ್ರದಲ್ಲಿ ನೊಣಗಳು ಹೆಚ್ಚಾಗಿದ್ದುದ್ದನ್ನು ಗಮನಿಸಿ ಹತ್ತಿರ ಹೋದಾಗ ಬಳ್ಳಿಗಳ ನಡುವೆ ಯುವಕನ ಮೃತದೇಹ ಪತ್ತೆಯಾಗಿದೆ.
ಚೌಕಹಳ್ಳಿ ಸೇತುವೆ ಬಳಿ ನದಿಗೆ ಬಿದ್ದಿದ್ದ ಸ್ಥಳದಿಂದ ಯುವಕನ ದೇಹ ಸುಮಾರು 14 ಕಿ.ಮೀ. ದೂರ ಕೊಚ್ಚಿ ಹೋಗಿದೆ. ನಂತರ ಆಂಬುಲೆನ್ಸ್ ಕರೆಸಿದ್ದು ಶವವನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಯಿತು ಎಂದು ಮಾಹಿತಿ ನೀಡಿದರು. ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ಪೋಷಕರಿಗೆ ನೀಡಲಾಗಿದ್ದು ಕೌಶಿಕ್ ರೆಡ್ಡಿ ಅಂತಿಮ ಸಂಸ್ಕಾರವು ಸಂಜೀವಯ್ಯನದೊಡ್ಡಿಯಲ್ಲಿ ನಡೆದಿದೆ.