ಹಳೆ ಉಂಡುವಾಡಿ ಬಳಿ ಕುಡಿಯುವ ನೀರು ಸರಬರಾಜು ಕಾಮಗಾರಿ ಪರಿಶೀಲಿಸಿದ ಸಚಿವರಾದ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್

ಮೈಸೂರು, ಜುಲೈ15:- ಹಳೆ ಉಂಡುವಾಡಿ ಬಳಿ ಕೆ.ಆರ್.ಎಸ್. ಹಿನ್ನೀರಿನಿಂದ ಮೈಸೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆಯ ಕಾಮಗಾರಿಯನ್ನು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರು ಗುರುವಾರ ಪರಿಶೀಲಿಸಿದರು.

ಬಳಿಕ ಮಾತನಾಡಿದ ಬೈರತಿ ಬಸವರಾಜ ಅವರು ಮೈಸೂರು ನಗರ ಒಂದು ಸುಸಜ್ಜಿತ ನಗರವಾಗಿದೆ. ಈ ನಗರಕ್ಕೆ ಹಲವಾರು ದೇಶಗಳಿಂದ ಹಾಗೂ ರಾಜ್ಯಗಳಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ. ಅವರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕುಡಿಯುವ ನೀರಿನ ಸರಬರಾಜು ಮಾಡಲಾಗುವುದು ಎಂದು ಹೇಳಿದರು.

ಕೈಗೆತ್ತಿಕೊಂಡಿರುವ ಈ ಯೋಜನೆಯನ್ನು 30 ತಿಂಗಳಲ್ಲಿ ಮುಗಿಸಿ ಮೈಸೂರು ತಾಲ್ಲೂಕು, ಮೈಸೂರು ನಗರ, ಮುಡಾ ವತಿಯಿಂದ ಅಭಿವೃದ್ಧಿಯಾದ ಬಡಾವಣೆಗಳಿಗೆ ನೀರನ್ನು ಸರಬರಾಜು ಮಾಡಲಾಗುವುದು. ಇದಕ್ಕಾಗಿ ಹೆಚ್ಚಿನ ಅನುದಾನವನ್ನು ಕೇಳಿದ್ದು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಪ್ರತ್ಯೇಕ ಜಲಮಂಡಳಿಯ ಬಗ್ಗೆ ಮಾತುಗಳು ಕೇಳಿಬಂದಿದ್ದು, ಇದರ ಸಾಧಕ ಬಾಧಕಗಳನ್ನು ನೋಡಿ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ ಮೈಸೂರು ನಗರ ಪಾಲಿಕೆಯಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬೃಹತ್ ಮೈಸೂರು ನಗರ ಪಾಲಿಕೆ ಮಾಡುವ ಸಂಬಂಧ ಶಾಸಕರೊಂದಿಗೆ ಹಾಗೂ ಸಂಸದರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದಾಗಿ ಹೇಳಿದರು.

ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಶಾಸಕ ಜಿ.ಟಿ.ದೇವೇಗೌಡ, ಸಂಸದ ಪ್ರತಾಪ್ ಸಿಂಹ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ‌.ರಾಜೀವ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿಯ ಸಿಇಒ ಎ.ಎಂ.ಯೋಗೀಶ್, ನಗರ ಪಾಲಿಕೆಯ ಆಯುಕ್ತ ಜಿ.ಲಕ್ಷ್ಮಿಕಾಂತ್ ರೆಡ್ಡಿ, ಮುಡಾ ಆಯುಕ್ತ ಡಾ. ಡಿ.ಬಿ.ನಟೇಶ್, ಮುಡಾ ಅಧೀಕ್ಷಕ ಇಂಜಿನಿಯರ್ ಶಂಕರ್, ತಹಶೀಲ್ದಾರ್ ರಕ್ಷಿತ್ ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *