“ಪುನೀತ-ನಮ್ಮ ಅಭಿಮಾನ” ಕೃತಿಯಲ್ಲಿ ನನ್ನದೊಂದು ಅಕ್ಷರ ಭಾಷ್ಪಾಂಜಲಿ..

“ವಿಸಿಂಪ್ಲಿಫೈ ಚಾರಿಟೇಬಲ್ ಟ್ರಸ್ಟ್(ರಿ) ವತಿಯಿಂದ ಆಯೋಜಿಸಲಾಗಿದ್ದ ಆನ್ಲೈನ್ ವೆಬಿನಾರ್ ಸಮಾರಂಭದಲ್ಲಿ “ಪುನೀತ – ನಮ್ಮ ಅಭಿಮಾನ” ಕಾವ್ಯಸಂಕಲನ ಲೋಕಾರ್ಪಣೆಯಾಯಿತು.

180 ಕವಿಹೃದಯಗಳ ಕಾವ್ಯ ಭಾಷ್ಪಾಂಜಲಿಯನ್ನು ಸಂಗ್ರಹಿಸಿ, ಭಾವಪೂರ್ಣ ಕೃತಿಯನ್ನಾಗಿಸಿ ಮರೆಯಲಾಗದ ಅಮರ ಚೇತನ ಪುನೀತ ರಾಜಕುಮಾರ್ ಅವರಿಗೆ ಅಮಿತ ಪ್ರೀತಿ, ಗೌರವ, ಆದರಗಳೊಂದಿಗೆ ಶ್ರದ್ದಾಂಜಲಿ ಸಮರ್ಪಿಸಿದ ವಿಸಿಂಪ್ಲಿಫೈ ಚಾರಿಟೇಬಲ್ ಟ್ರಸ್ಟ್(ರಿ) ಅವರ ಈ ಕಾರ್ಯ ಅವಿಸ್ಮರಣೀಯ. ಈ ಕೃತಿಯನ್ನು ಹೊರ ತರಲು ಅವಿರತ ಶ್ರಮಿಸಿದ ಡಾ.ಮಲಕಪ್ಪ. ಬಿ. ಮಹೇಶ್ ಹಾಗೂ ಡಾ.ಸುನೀಲ್ ಪರೀಟ ಇವರ ಪರಿಶ್ರಮ ಶ್ಲಾಘನೀಯ ಮತ್ತು ಕಾವ್ಯರೂಪದಲ್ಲಿ ತಮ್ಮ ಭಾವಾಂಜಲಿಗಳನ್ನು ಅರ್ಪಿಸಿದ ಸಮಸ್ತ 180 ಕವಿಮನಸುಗಳೂ ಅಭಿನಂದನೀಯ.

ಈ ಕೃತಿಯಲ್ಲಿ ನನ್ನ ” ಅಮರ-ಅಜರಾಮರ” ಕವಿತೆಯು ಪ್ರಕಟವಾಗಿದೆ. ಕವಿತೆ ಮತ್ತು ಅಭಿನಂದನಾ ಪತ್ರವನ್ನು ನಿಮ್ಮ ಅವಗಾಹನೆಗಾಗಿ ಕೆಳಗೆ ಲಗತ್ತಿಸಿದ್ದೇನೆ. ಉಸಿರಳಿದರೂ ಹೆಸರುಳಿಸಿ ಹೋದ, ತಮ್ಮ ಅದ್ಭುತ ಕಲಾಪ್ರತಿಭೆ ಮತ್ತು ಅನನ್ಯ ಸಮಾಜಮುಖಿ ಕಾರ್ಯಗಳಿಂದ ಕರುನಾಡಿನ ಪ್ರತಿ ಮನೆ-ಮನಗಳಲ್ಲಿ ತಮ್ಮ ನೆನಪನ್ನು ಅಚ್ಚಳಿಯದಂತೆ ಮೂಡಿಸಿರಿರುವ ಪುನೀತರ ದಿವ್ಯಾತ್ಮಕ್ಕೆ ಮತ್ತೊಮ್ಮೆ ಅಂತರಾಳದ ಅನಂತ ನಮನಗಳು.” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.

ಅಮರ ಅಜರಾಮರ.!

ಸರಳತೆ ಸಜ್ಜನಿಕೆ ಸೌಜನ್ಯಗಳ ಪ್ರತೀಕ
ಪ್ರೀತಿ ನಮ್ರತೆ ವಿನಯಗಳ ದ್ಯೋತಕ
ಲೋಕಕೇ ಮಾದರಿಯಾದ ಚೇತನ
ಮುತ್ತುರಾಜರ ಮಮತೆಯ ನಂದನ.!

ಹಿರಿಯರಿಗೆ ಆಸರೆಯಾದ ವಿನೀತ
ಕಿರಿಯರಿಗೆ ಬೆಂಬಲವಾದ ಪುನೀತ
ಕಲಾ ಲೋಕ ಬೆಳಗಿದ ಧೀಮಂತ
ನಗುತ್ತಲೇ ಜಗಗೆದ್ದ ಪಾರ್ವತಿಸುತ.!

ಬೆಳ್ಳಿತೆರೆಯಂತೇ ನಿಜ ಬದುಕಿನಲ್ಲು
ಮಗ, ತಮ್ಮ, ಪತಿ, ತಂದೆಯ ಪಾತ್ರ
ಆದರ್ಶಗೊಳಿಸಿದ ಕನ್ನಡದ ಕುವರ
ನಮ್ಮ ದೊಡ್ಮನೆಯ ರಾಜಕುಮಾರ.!

ಕರುನಾಡಿನ ಹೆಮ್ಮೆಯ ಯುವರತ್ನ
ಅಪ್ಪು ಅಕ್ಷರಶಃ ಕರ್ನಾಟಕರತ್ನ.!
ದಣಿವರಿಯದೆ ದುಡಿದ ಜೀವನ್ಮುಖಿ
ಸದ್ದಿಲ್ಲದೆ ಸೇವೆಗೈದ ಸಮಾಜಮುಖಿ.!

ಹೆಸರು ಪ್ರಚಾರ ಹಂಗಿಲ್ಲದಂತೆ
ನಿತ್ಯ ಅಬಲರಿಗೆ ಕೈಯೆತ್ತಿ ಕೊಟ್ಟರು
ಚಿಕ್ಕದೊಂದು ಸುಳಿವೂ ಕೊಡದೆ
ಭವದಿಂದ ಹೊರ ಸಾಗಿ ಬಿಟ್ಟರು.!

“ಇಲ್ಲಿ ಬದುಕಿನ ಅವಧಿಗಿಂತಲೂ
ಬೆಳಗುವ ಪರಿಧಿಯೇ ಮುಖ್ಯವೆಂದು”
ಸಾಕ್ಷೀಕರಿಸಿದ ಪುನೀತರ ಭವ್ಯಜೀವನ
ಯಗಯುಗಕೂ ನಿತ್ಯ ಸತ್ಯ ನಿದರ್ಶನ.!

ಮನೆ-ಮನಗಳÀಲಿ ಮಾಸದ ರೂಪ
ಯುವಕರ ಬದುಕಿನ ದಿವ್ಯ ದಾರಿದೀಪ
ಚರಿತ್ರೆಯ ಪುಟಗಳಲಿ ಅಜರಾಮರ
ಅಮರ ನಮ್ಮ ಪುನೀತ ರಾಜಕುಮಾರ.!

ಎ.ಎನ್.ರಮೇಶ್. ಗುಬ್ಬಿ.