ರೈತರಿಗೆ ಕಾಟ ಕೊಡುತ್ತಿರುವ ಒಂಟಿಸಲಗ

ರಾಮನಗರ: ತಾಲೂಕಿನ ಕೈಲಾಂಚ ಹೋಬಳಿಯ ಹುಣಸನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಒಂಟಿ ಸಲಗವೊಂದು ಕಾಣಿಸಿಕೊಂಡಿದ್ದು ಆಗಾಗ್ಗೆ ಜಮೀನುಗಳಿಗೆ ನುಗ್ಗುವ ಇದು ರೈತರ ಬೆಳೆಗಳನ್ನು ತಿಂದು ತುಳಿದು ನಾಶ ಮಾಡುತ್ತಿದೆ.

ಈ ನಡುವೆ ಜವಳಗೆರೆದೊಡ್ಡಿ ಗ್ರಾಮದ ವಾಸು ಪುಟ್ಟಮಾಸ್ತಿಗೌಡ ಎಂಬುವರ ತೋಟದಲ್ಲಿ ದಾಳಿ ನಡೆಸಿ ಬಾಳೆ ಮತ್ತು ಅಡಿಕೆ ಸಸಿಗಳನ್ನು ನಾಶಪಡಿಸಿದೆ. ಕಳೆದ ಹದಿನೈದು ದಿನಗಳ ಹಿಂದೆ ಕಾವೇರಿ ವನ್ಯಜೀವಿ ಧಾಮದಿಂದ ಬಂದು ತೆಂಗಿನಕಲ್ಲು ಅರಣ್ಯದಲ್ಲಿ ಬೀಡು ಬಿಟ್ಟಿದ್ದ ಕಾಡಾನೆ ಅರ್ಕಾವತಿ ನದಿಯನ್ನು ದಾಟಿ ಕೂನಗಲ್ ಅರಣ್ಯ ಸೇರಿದೆ. ಈ ಭಾಗದ ತೋಟಗಳಲ್ಲಿ ರೈತರ ಫಸಲನ್ನು ನಾಶಪಡಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಾಡಾನೆಯನ್ನು ತೆಂಗಿನಕಲ್ಲು ಅರಣ್ಯದ ಕಡೆಗೆ ಅಟ್ಟಿದ್ದರು.

ಬೆಳೆಯ ರುಚಿಯನ್ನುಂಡ ಒಂಟಿ ಕಾಡಾನೆ ಮತ್ತೆ ಕೂನಗಲ್ ಅರಣ್ಯ ಪ್ರದೇಶಕ್ಕೆ ವಾಪಸ್ಸಾಗಿ ಜಮೀನಿಗೆ ನುಗ್ಗುತ್ತಿದೆ. ತೆಂಗಿನಕಲ್ಲು ಅರಣ್ಯದಿಂದ ಬರುವ ಆನೆಗಳು ಅರ್ಕಾವತಿ ನದಿಯನ್ನು ದಾಟಿ ಕೂನಗಲ್ ಅರಣ್ಯ ಸೇರುವುದು ಕಷ್ಟಕರ. ಆದರೆ ಕಳೆದ ಕೆಲವು ತಿಂಗಳಿಂದ ಹಂದಿಗೊಂದಿ ಅರಣ್ಯಕ್ಕೆ ಬಂದ ಒಂಟಿ ಸಲಗ ಕೂನಗಲ್, ನಾಗೋಹಳ್ಳಿ ಅರಣ್ಯದಲ್ಲಿ ಠಿಕಾಣಿ ಹೂಡಿ ಕಾಡಂಚಿನ ಗ್ರಾಮಗಳಲ್ಲಿ ಕಾಟ ಕೊಡುತ್ತಿದೆ. ರೈತರ ತೋಟಗಳಿಗೆ ದಾಳಿಯಿಡುವ ಕಾಡಾನೆ ತಂತಿ ಬೇಲಿಯನ್ನು ನಾಶಪಡಿಸುವುದಲ್ಲದೆ ನೀರಿನ ಪರಿಕರ, ಬೆಳೆ ಫಸಲು, ಅಡಿಕೆ, ತೆಂಗು, ಮಾವು, ಬಾಳೆ, ಸೋಲಾರ್ ಪರಿಕರ, ಎತ್ತಿನ ಗಾಡಿಗಳು, ಕಬ್ಬಿಣದ ಗೇಟುಗಳನ್ನು ಸಹ ನಾಶಪಡಿಸಿದೆ.

ಅರಣ್ಯಾಧಿಕಾರಿಗಳು ತಕ್ಷಣವೇ ಒಂಟಿ ಆನೆಯನ್ನು ಅದರ ಮೂಲ ಸ್ವಸ್ಥಾನಕ್ಕೆ ಸೇರಿಸಲು ಮುಂದಾಗಬೇಕು. ಒಂಟಿ ಸಲಗ ಪದೇ ಪದೇ ಗ್ರಾಮಗಳ ಕಡೆ ಬರುತ್ತಿರುವುದು, ಅದರ ಚಲನವಲನ ನೋಡುತ್ತಿದ್ದರೆ ಕೃಷಿ ಕೆಲಸ ನಿರ್ವಹಿಸಲು ಭಯವಾಗುತ್ತಿದೆ. ಬೆಳೆ ನಷ್ಟ ಉಂಟಾದ ರೈತರಿಗೆ ಸೂಕ್ತ ವೈಜ್ಞಾನಿಕ ಪರಿಹಾರ ನೀಡಬೇಕು. ಕಾಡಾನೆ ಹಾವಳಿಯನ್ನು ಶಾಶ್ವತವಾಗಿ ತಡೆಯಬೇಕೆಂದು ರೈತರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *