ಮೈಸೂರು: ನಟ ದರ್ಶನ್ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಠಿಸಿ ಬ್ಯಾಂಕ್ ನಲ್ಲಿ ಸುಮಾರು 25 ಕೋಟಿ ರೂ. ಸಾಲ ಪಡೆಯಲು ಮುಂದಾದ ಪ್ರಕರಣ ಹೊಸ ತಿರುವು ಪಡೆಯುತ್ತಿದ್ದು, ಈ ಕುರಿತಂತೆ ಏನಾಯಿತು? ಏಕಾಯಿತು? ಇದರ ಹಿಂದೆ ಯಾರಿದ್ದಾರೆ? ಎಂಬಿತ್ಯಾದಿ ವಿವರಗಳನ್ನು ಸ್ವತಃ ನಟ ದರ್ಶನ್ ಅವರೇ ಮಾಧ್ಯಮದವರ ಮುಂದೆ ತೆರೆದಿಟ್ಟಿದ್ದಾರೆ.
ಇಷ್ಟಕ್ಕೂ ಆ ಮಹಿಳೆಯನ್ನು ಮುಂದಿಟ್ಟುಕೊಂಡು ಒಂದು ಷಡ್ಯಂತ್ರ ಹೆಣೆಯಲಾಯಿತಾ? ವ್ಯವಹಾರದಲ್ಲಿ ದರ್ಶನ್ ಮೇಲಿದ್ದ ಆಕ್ರೋಶವನ್ನು ವಿರೋಧಿಗಳು ಈ ಮೂಲಕ ತೀರಿಸಿಕೊಂಡರಾ? ಎಂಬಿತ್ಯಾದಿ ಪ್ರಶ್ನೆಗಳು ಕೂಡ ಈಗ ಹುಟ್ಟಿಕೊಳ್ಳಲಾರಂಭಿಸಿವೆ. ಇಷ್ಟಕ್ಕೂ ದರ್ಶನ್ ತೆರೆದಿಟ್ಟ ವಿಚಾರಗಳೇನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರಿನ ಕೆನರಾ ಬ್ಯಾಂಕ್ ಮ್ಯಾನೇಜರ್ ಅಂತ ಹೇಳಿಕೊಂಡ ಅರುಣ ಕುಮಾರಿ ಎಂಬಾಕೆ ನಕಲಿ ದಾಖಲಾತಿ ಸೃಷ್ಠಿಸಿ ಸಾಲ ಪಡೆಯಲು ಮುಂದಾಗಿದ್ದಳು. 25 ಕೋಟಿ ರೂಪಾಯಿ ಸಾಲಕ್ಕೆ ನಾನು ಶೂರಿಟಿ ಹಾಕಿದ್ದೇನೆ ಅಂತ ಕಥೆ ಕಟ್ಟಿದ್ದಳು. ಈ ವಿಚಾರವಾಗಿ ಜೂನ್ 6 ರಲ್ಲಿ ಉಮಾಪತಿಯಿಂದ ನನಗೆ ಕಾಲ್ ಬಂದಿತ್ತು. ಬಾಸ್ ನೀವು ಶ್ಯೂರಿಟಿಗೆ ಸಹಿ ಹಾಕಿದ್ರಾ ಅಂತಾ ಕೇಳಿದ್ರು. ನಾನು ಏಕೆ ಮತ್ತು ಎಷ್ಟಕ್ಕೆ ಅಂಥ ಕೇಳಿದ್ದಾಗ 25 ಕೋಟಿ ಅಂತಾ ಹೇಳಿದ್ರು. ಆ ಮೇಲೆ ಬ್ಯಾಂಕ್ ಮ್ಯಾನೇಜರ್ ಅರುಣ್ ಕುಮಾರಿ ಲೈನ್ ನಲ್ಲಿ ಇದ್ದಾರೆ ಅಂಥ ಹೇಳಿ ಕಾಲ್ ಕನೆಕ್ಟ್ ಮಾಡಿದ್ರು. ಆ ನಂತರ ನಾನು ಅರುಣ ಕುಮಾರಿಯನ್ನು ಮನೆಗೆ ಕರೆದುಕೊಂಡು ಬರುವಂತೆ ಹೇಳಿದ್ದೆ. ನಿರ್ಮಾಪಕ ಉಮಾಪತಿ ಆಕೆಯನ್ನು ನನ್ನ ಮನೆಗೆ ಕರೆದುಕೊಂಡು ಬಂದರು.
ನನ್ನ ಮನೆಗೆ ಬಂದ ಅರುಣ ಕುಮಾರಿ ಕೆಲವು ವಿಚಾರ ಸ್ಪಷ್ಟಪಡಿಸಿ ಈ ಪ್ರಕರಣದಲ್ಲಿ ಅಂತಿಮವಾಗಿ ಉಮಾಪತಿ ಹೆಸರನ್ನು ಹೇಳಿದ್ದಳು. ಇನ್ನು ಹೆಚ್ಚು ಸಮಯ ಮನೆಯಲ್ಲಿ ಕೂರಿಸಿಕೊಂಡರೆ ಕಷ್ಟ ಅಂಥ ಆಕೆಯನ್ನು ವಾಪಾಸು ಕಳುಹಿಸಿದೆ. ಇಷ್ಟಕ್ಕೂ ಈ ರಗಳೆ ಆರಂಭವಾಗಿದ್ದು ಕಳೆದ ಏಪ್ರಿಲ್ 9 ರಂದು. ಆದರೆ ಕೊರೊನಾ ಲಾಕ್ಡೌನ್ ಇದ್ದ ಕಾರಣ ತೋಟದಲ್ಲಿದ್ದೆ. ಇದೀಗ ನನಗೆ ಆಘಾತ ತಂದಿದೆ. ಇದರಲ್ಲಿ ಯಾರೇ ಆದರೂ ನಾನು ಸುಮ್ಮನೆ ಬಿಡುವುದಿಲ್ಲ,. ಈ ಪ್ರಕರಣದಲ್ಲಿ ಅರುಣ ಕುಮಾರಿ ಜೊತೆ ಕಾಣದ ಪ್ರಭಾವಿ ಕೈಯೊಂದು ಇದೆ. ಆದರೆ ಅದು ಯಾರೆಂದು ತಿಳಿಯುತ್ತಿಲ್ಲ. ಪೊಲೀಸರಿಗೆ ದೂರು ನೀಡಿದ್ದು, ಅವರ ತನಿಖೆಯಿಂದ ವಾಸ್ತವತೆ ಹೊರ ಬರಲಿದೆ.
ನನ್ನ ಹೆಸರು ದುರ್ಬಳಕೆ ಮಾಡಿಕೊಂಡು ಹಣ ಮಾಡಲು ಹೊರಟ ಯಾರನ್ನೆ ಆದರೂ ನಾನು ಸುಮ್ಮನೆ ಬಿಡುವುದಿಲ್ಲ, ಅದು ಹರ್ಷ ಆಗಲಿ ರಾಕೇಶ್ ಆಗಲಿ. ಇನ್ಯಾರೇ ಆಗಲಿ. ಇದೇನು ಕಡಿಮೆ ಮೊತ್ತವಲ್ಲ. ಹೀಗಾಗಿ ಇದು ಗೊತ್ತಾಗಲೇಬೇಕು, ಆಕೆ ಠಾಣೆಗೆ ಬಂದು ಮಾಹಿತಿ ಕೊಡಬೇಕು. ಆಕೆ ಕೊಟ್ಟಿರೋದು ಉಮಾಪತಿ ಹೆಸರು. ಅದಕ್ಕೆ ಮೈಸೂರಿನಲ್ಲಿ ದೂರು ಕೊಡುವಂತೆ ಹೇಳಿದೆ. ಉಮಾಪತಿ ಬೆಂಗಳೂರಿನ ಜಯನಗರದಲ್ಲಿ ದೂರು ನೀಡಿದ್ದಾರೆ. ನಾನು ಆರ್ ಆರ್ ನಗರದಲ್ಲಿ ದೂರು ನೀಡಲು ಯೋಚನೆ ಮಾಡಿದ್ದೆ. ನಾವೆಲ್ಲರೂ ಒಂದೇ, ಯಾರಲ್ಲೂ ವ್ಯತ್ಯಾಸಗಳಿಲ್ಲ.
ದೂರು ಕೊಟ್ಟ ಮೇಲೆ ಅರುಣಾಕುಮಾರಿ ಕರೆ ಮಾಡಿ, ನೀವು ದೂರು ಕೊಟ್ಟಿದ್ದೀರಾ ಎಂದರು. ಹೌದು ಎಂದಿದಕ್ಕೆ ಆಗ ನಾನು ಬಂದು ಸತ್ಯ ಹೇಳುತ್ತೇನೆ ಎಂದರು. ಅರುಣಾಕುಮಾರಿ ಮನೆಗೆ ಮಗನ ಜತೆ ಬಂದರು. ಆಕೆ ಬಂದು ಮಲ್ಲೇಶ್ ಹೆಸರು ಹೇಳಿದರು. ನಾವು ಮಲ್ಲೇಶ್ ನನ್ನು ಕೇಳಲು ಆತನ ನಂಬರ್ ಕೇಳಿದಾಗ ಆಕೆ ಕೊಟ್ಟ ನಂಬರ್ ರಾಂಗ್ ಆಗಿತ್ತು. ಜತೆಗೆ ಉಮಾಪತಿ ನೀಡಿದ್ದ ದೂರಿನ ಪ್ರತಿ ನೋಡಿ ಆಕೆ ಶಾಕ್ ಆಗಿದ್ದಳಲ್ಲದೆ, ಇದೆಲ್ಲಾ ಮಾಡಿಸಿದ್ದು ಉಮಾಪತಿ ಎಂದು ಹೇಳಿದಳು
ಇದರಲ್ಲಿ ನನ್ನ ಸ್ನೇಹಿತರ ಪೈಕಿ ಯಾರ ತಪ್ಪೂ ಇಲ್ಲ. ತಪ್ಪು ಮಾಡಿದ್ದರೆ ಇವರು ಇಲ್ಲಿ ಕುಳಿತುಕೊಳ್ಳುತ್ತಿರಲಿಲ್ಲ. ಇನ್ನು ಏಪ್ರಿಲ್ 5 ರಿಂದ ಉಮಾಪತಿ ಅರುಣಾಕುಮಾರಿ ಚಾಟ್ ಮಾಡಿರುವ ದಾಖಲೆಯೂ ಇದೆ. ಹರ್ಷ ಅರುಣಾಕುಮಾರಿ ಸಂಭಾಷಣೆ 10 ನಿಮಿಷ ಇದೆ. ಅದು ಏನೇ ಆಗಲಿ ತನಿಖೆ ಆಗಲಿ ತಪ್ಪಿತಸ್ಥರು ಯಾರೇ ಆಗಲಿ ನಾನು ಸುಮ್ಮನೆ ಬಿಡಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಇದೆಲ್ಲದರ ನಡುವೆ ಅತ್ತ ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಉಮಾಪತಿ ಸಾಲ ತೆಗೆದುಕೊಳ್ಳಲು ದರ್ಶನ್ ಶ್ಯೂರಿಟಿ ಕೊಟ್ಟಿದ್ದಾರೆ ಎಂಬ ವಿಚಾರವನ್ನು ಅರುಣಕುಮಾರಿ ನನಗೆ ತಿಳಿಸಿದ್ರು. ತರುವಾಯ ಈ ವಿಚಾರವನ್ನು ನಾನು ದರ್ಶನ್ ಅವರ ಗಮನಕ್ಕೆ ತಂದೆ. ಆದರೆ ಈ ಪ್ರಕರಣದಲ್ಲಿ ನನ್ನನ್ನೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಇದರ ಪರಿಣಾಮವಾಗಿ ದರ್ಶನ್ ಸ್ನೇಹಿತರಾದ ರಾಕೇಶ್ ಪಾಪಣ್ಣ, ಶರ್ಮ ಮತ್ತು ಹರ್ಷ ಅವರಿಂದ ಬೆದರಿಕೆ ಬಂದಿದೆ
ಈ ವಿಚಾರವನ್ನು ದರ್ಶನ್ ದೊಡ್ಡದಾಗಿ ಬಿಂಬಿಸಿದ್ದಾರೆ. ಇದು ಸರಿಯಲ್ಲ. ದರ್ಶನ್ ಸ್ನೇಹಿತರಿಂದ ನನಗೆ ಬೆದರಿಕೆ ಇದೆ ಎಂದು ಆಪಾದಿಸಿದ್ದಾರೆ. ಒಟ್ಟಾರೆ ಈ ಪ್ರಕರಣ ಗೋಜಲು ಗೋಜಲಾಗಿ ಮುಂದುವರೆಯುತ್ತಿದ್ದು, ಸೂಕ್ತ ತನಿಖೆಯಾಗಿ ನೈಜಾಂಶ ಹೊರ ಬರಬೇಕಷ್ಟೆ.