ಸಾಹಸ ಅಕಾಡೆಮಿಗೆ ಒಂದು ವರ್ಷದೊಳಗೆ ಪ್ರತ್ಯೇಕ ನೀತಿ

ಜಿಲ್ಲೆಯಲ್ಲಿ ರಾಷ್ಟ್ರಮಟ್ಟದ ಸೇಲಿಂಗ್ ಚಾಂಪಿಯನ್ ಶಿಪ್ ಆಯೋಜನೆ ಮೂಲಕ ಕ್ರೀಡೆಗೆ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ ಎಂದು ರೇಷ್ಮೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಹೇಳಿದರು.
ಕೆ ಆರ್.ಎಸ್ ಹಿನ್ನೀರಿನಲ್ಲಿ ವೈ.ಎ.ಐ(Yachting Association of India), yachting association of Karnataka ಇವರ ಸಹಯೋಗದಲ್ಲಿ ತ್ರಿಶ್ನಾ ನೌಕಾಯಾನ ಕ್ಲಬ್, ಮದ್ರಾಸ್ ಸಪ್ಪರ್ಸ್ ಯಾಚಿಂಗ್ ಅಸೋಸಿಯೇಷನ್ ಆಫ್ ಕರ್ನಾಟಕ ಮತ್ತು ಜನರಲ್ ತಿಮ್ಮಯ್ಯ ನ್ಯಾಷನಲ್ ಅಕಾಡೆಮಿ ಆಫ್ ಅಡ್ವೆಂಚರ್ ಇವರ ವತಿಯಿಂದ ನಡೆದ ರಾಷ್ಟ್ರಮಟ್ಟದ ವೈ.ಎ.ಐ ಮಲ್ಟಿ ಕ್ಲಾಸ್ ಸೇಲಿಂಗ್ ಚಾಂಪಿಯನ್‌ಶಿಪ್ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಕೃಷ್ಣರಾಜಸಾಗರದಲ್ಲಿ ಇದು ಮೊದಲ ಕಾರ್ಯಕ್ರಮ ಆದರೆ ಇದು ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು ಎಂದರು.
ಮಕ್ಕಳು ಇಲ್ಲಿನ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದು, ಒಲಂಪಿಕ್‌ನಲ್ಲಿಯೂ ಭಾಗವಹಿಸುವಂತಾಗಬೇಕು.
ಮುಂದಿನ ಓಲಂಪಿಕ್ ನಲ್ಲಿ ಪದಕ ಗಳಿಸುವ ಸಾಮರ್ಥ್ಯವಿರುವಂತಹ 75 ಕ್ರೀಡಾಪಟುಗಳನ್ನು ಗುರುತಿಸಲಾಗುವುದು. ಅವರಿಗೆ ವಾರ್ಷಿಕ ತಲಾ ರೂ. 5 ಲಕ್ಷ ನೀಡಿ ಪ್ರೋತ್ಸಾಹಿಸಲಾಗುವುದು. ಯುವಬಲೀಕರಣ ಮತ್ತು ಕ್ರೀಡಾ ಸಚಿವನಾಗಿ ದೇಶದಲ್ಲಿಯೇ ರಾಜ್ಯಕ್ಕೆ ಗೌರವ ತರಲು ಹಗಲಿರುಳು ಶ್ರಮಿಸುತ್ತೇನೆ.
ಸಾಹಸ ಕ್ರೀಡೆಗೆ ಪ್ರತ್ಯೇಕ ನೀತಿ

ರಾಜ್ಯದಲ್ಲಿ ಸಾಹಕ ಕ್ರೀಡೆಗೆ ವಿಫುಲ ಅವಕಾಶವಿದೆ. ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ಮೂಲಕ ರಾಜ್ಯದಲ್ಲಿ ಸಾಹಸ ಕ್ರೀಡೆಗೆ ಹೆಚ್ಚಿನ ಉತ್ತೇಜ ನೀಡಲಾಗುವುದು. ರಾಜ್ಯದಲ್ಲಿ ಸಾಹಸ ಕ್ರೀಡೆಗೆ ಇರುವ ಉತ್ತಮ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳತ್ತೇವೆ. ಅಲ್ಲದೆ ಒಂದು ವರ್ಷದೊಳಗೆ ಸಾಹಸ ಕ್ರೀಡೆಗೆ ಪ್ರತ್ಯೇಕ ನೀತಿಯನ್ನು ಜಾರಿಗೆ ತರುತ್ತೇವೆ. ಮುಂದಿನ ಮಾರ್ಚ್ ತಿಂಗಳಲ್ಲಿ ಖೇಲೊ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ಆಯೋಜಿಸುತ್ತಿದ್ದೇವೆ. ಆಮೂಲಕ ರಾಜ್ಯದಲ್ಲಿ ಇಡೀ ರಾಷ್ಟ್ರದ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸುವಲು ಅವಕಾಶ ಮಾಡಕೊಡಲಾಗುತ್ತಿದೆ ಎಂದು ಸಚಿವರು ಈ ಸಂದರ್ಭದಲ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಪುಟ್ಟರಾಜು, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶಾಲಿನಿ ರಜಿನೀಶ್, ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿಪಂ ಸಿಇಒ ದಿವ್ಯಪ್ರಭು ಹಾಗೂ ಮತ್ತಿತರರು ಉಪಸ್ಥಿತರಿದ್ದರು .