ಹಾಸನ: ಎಪತ್ತರ ದಶಕದಲ್ಲಿ ರಂಗಗೀತೆಯು ಮನುಷ್ಯನ ಸಂವಹನೆಗೆ ರಾಜಮಾರ್ಗವಾಗಿತ್ತು ಎಂದು ರಂಗಕರ್ಮಿ ಕಿರುತೆರೆ ನಟ ಕೆ.ವಿ.ನಾಗರಾಜಮೂರ್ತಿ ತಿಳಿಸಿದರು.
ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಹಾಗೂ ಕರ್ನಾಟಕ ರಂಗಸಂಗೀತ ಪರಿಷತ್ತು ಬೆಂಗಳೂರು ಇವರ ಸಹಯೋಗದಲ್ಲಿ ರಂಗಸಂಗೀತ ರತ್ನ ಆರ್.ಪರಮಶಿವನ್ ಸ್ಮರಣಾರ್ಥ ಏರ್ಪಡಿಸಿದ್ದ ರಾಜ್ಯಮಟ್ಟದ ಅಂತರ್ಜಾಲ ರಂಗಗೀತೆ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಂಗಭೂಮಿ ರಂಗಗೀತೆಗೆ ಸಂಗೀತರತ್ನ ಆರ್.ಪರಮಶಿವನ್ ಹಾಗೂ ಏಣಗಿ ಬಾಳಪ್ಪ ಹಿಂದುಸ್ಥಾನಿ ಸಂಗೀತಕ್ಕೆ ಮಲ್ಲಿಕಾರ್ಜುನ ಮನ್ಸೂರ್, ಬಸವರಾಜರಾಜಗುರು, ಬಾಲಗಂಧರ್ವರ ಕೊಡುಗೆ ಅಪಾರವಾದುದು ಎಂದು ಹೇಳಿದರು.
ಆರ್.ಪರಮಶಿವನ್ ಅವರ ಪುತ್ರ ದೀಪಕ್ ಪರಮಶಿವನ್ ಮಾತನಾಡಿ.ನಮ್ಮ ತಂದೆ 90ನೇ ಇಳಿ ವಯಸ್ಸಿನಲ್ಲಿಯೂ 1500 ಹಾಡುಗಳನ್ನು ತಮ್ಮ ತಲೆಯಲ್ಲಿಟ್ಟುಕೊಂಡು ಹಾಡುತ್ತಿದ್ದ ಅವರ ಸ್ಮರಣಶಕ್ತಿ ಮತ್ತು ಹಾಡುಗಾರಿಕೆಗೆ ಅಮೇರಿಕದಂತಹ ರಾಷ್ಟ್ರಗಳಲ್ಲಿಯೂ ಶ್ಲಾಘನೆ ಕಂಡು ನನ್ನ ಹೃದಯ ತುಂಬಿ ಬರುತ್ತಿತ್ತು ಎಂದರು.
ಕರ್ನಾಟಕ ರಂಗ ಸಂಗೀತ ಪರಿಷತ್ತು ಅಧ್ಯಕ್ಷರಾದ ಹೆಚ್.ಎಸ್.ಗೋವಿಂದಗೌಡರು ಮಾತನಾಡಿ ಕನ್ನಡ ರಂಗಗೀತೆಗಳಲ್ಲಿ ಅರ್ಧದಷ್ಟಕ್ಕೂ ಹೆಚ್ಚು ಗೀತೆಗಳನ್ನು ಆರ್.ಪರಮಶಿವನ್ ಹಾಡಿರುವುದು ಅವರನ್ನು ಸಹಜವಾಗಿ ಸಂಗೀತರತ್ನ ಭಾಜನರನ್ನಾಗಿಸಿದೆ. ಅವರೊಟ್ಟಿಗೆ ಅವಿಸ್ಮರಣೀಯ ಸೇವೆ ಮಾಡುವ ಮೂಲಕ ಏಣಗಿ ಬಾಳಪ್ಪ ಮೊದಲಾದವರು ಸಹ ಕನ್ನಡ ರಂಗಸಂಗೀತವನ್ನು ಶ್ರೀಮಂತಗೊಳಿಸಿದರು ಎಂದರು.
ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತುಮಕೂರಿನ ಡಾ.ಲಕ್ಷ್ಮಣದಾಸ್ ಮಾತನಾಡಿ ರಂಗಗೀತೆಗಳದ್ದು ಮುಗಿಯದಕಥೆ. ಇದಕ್ಕೆ ಅದರದೇ ಆದ ವಿಶಿಷ್ಟತೆ ರೂಪುರೇಷೆ ಇದೆ. ಆದ್ದರಿಂದ ನಾವು ರಂಗಸಂಗೀತದ ಇಂಗಿತವನ್ನು ಅರ್ಥ ಮಾಡಿಕೊಂಡು ಅದರ ಪುನರುತ್ಥಾನ ಮಾಡಬೇಕಿದೆ ಎಂದರು.
ನಾಟಕಕಾರ ಗೊರೂರು ಅನಂತರಾಜು ಮಾತನಾಡಿ ಕಳೆದ 20 ವರ್ಷಗಳಿಂದ ರಂಗಭೂಮಿ ನಂಟು ಹೊಂದಿದ್ದು ಇಂದು ಅಳಿವಿನಂಚಿನಲ್ಲಿರುವ ರಂಗಸಂಗೀತಕ್ಕೆ ಪುನಶ್ಚೇತನ ನೀಡುವ ದಿಸೆಯಲ್ಲಿ ಅಂತರ್ಜಾಲ ಕಾರ್ಯಕ್ರಮ ಏರ್ಪಡಿಸುವ ಕನಸು ಸಾಕಾರವಾಗಿದೆ. ಕರ್ನಾಟಕ ರಂಗಸಂಗೀತ ಪರಿಷತ್ತು ಆರು ರಂಗಸಂಗೀತ ಸಮ್ಮೇಳನ ಸಂಘಟಿಸಿದೆ. ಮುಂದೆಯೂ ಈ ಪ್ರಕಾರ ಸಮ್ಮೇಳನ ನಡೆಯಲೆಂದು ಆಶಿಸಿದರು.
ಕ.ರಾ.ಬ.ಸಂಘದ ರಾಜ್ಯಾಧ್ಯಕ್ಷ ಮಧುನಾಯ್ಕ ಲಂಬಾಣಿ, ಉಪಾಧ್ಯಕ್ಷ ಬಾರಾವಲಿ ಬಾವಿಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ ಮಾತನಾಡಿದರು.
ಹಾಸನದಿಂದ ಎ.ಸಿ.ರಾಜು, ಗುಂಡುರಾಜ್ ಹೆಚ್.ಜಿ.ಗಂಗಾಧರ್, ಮೈಸೂರಿನಿಂದ ಕುಪ್ಯ ವೆಂಕಟರಾಂ ಟಿ.ನರಸೀಪುರ, ಮಂಜುನಾಥ ಪೊಲೀಸ್, ಕು.ಭೂಮಿಕ, ಚಿನಕುರಳಿ ಸಿದ್ದಲಿಂಗೇಗೌಡರು, ರಾಜಶೇಖರ್ಚಾಮರಾಜನಗರ, ಮಂಡ್ಯ ಸಂತೋಷಕುಮಾರ್, ಕುಳ್ಳೇಗೌಡ ಪಾಂಡವಪುರ, ಬೆಂಗಳೂರಿನಿಂದ ಡಬ್ಲ್ಯು.ಹೆಚ್. ಶಾಂತಕುಮಾರ್, ನಂಜುಂಡಪ್ಪ, ಚಿನ್ನಸ್ವಾಮಿ, ಯೋಗಣ್ಣ ತುಮಕೂರು, ಎ.ಎನ್.ನಾರಾಯಣಸ್ವಾಮಿ, ಮೋಹನಬಾಬು, ಕಿರಣಕುಮಾರ್ ಕೊಡಗು, ಮಂಜಪ್ಪಎಲ್. ಚಿಕ್ಕಮಗಳೂರು, ಮೌನೇಶ ವಿಶ್ವಕರ್ಮ, ಲಕ್ಷ್ಮಿಪ್ರಕಾಶ್, ಉ.ಕ. ಮೊದಲಾಗಿಇಪ್ಪತೈದಕ್ಕೂ ಹೆಚ್ಚು ಗಾಯಕರು ರಂಗಗೀತೆಗಳಿಂದ ರಂಜಿಸಿದರು. ವಿದ್ವಾನ್ ಕಿರಗಸೂರುರಾಜಪ್ಪ ಪ್ರಾರ್ಥಿಸಿದರು. ಮಹೇಶ್ ಎಚ್.ಎಸ್.ಸ್ವಾಗತಿಸಿದರು. ಕಾರ್ತಿಕ್ಆಚಾರ್ಯ ನಿರೂಪಿಸಿದರು. ಕು.ಲಕ್ಷ್ಮಿ ಮಾನಸ ವಂದಿಸಿದರು.