ಗಣರಾಜ್ಯೋತ್ಸವದ ಸ್ಥಬ್ಧಚಿತ್ರಗಳ ಆಯ್ಕೆ ಮಾರ್ಗ ಸೂಚಿ ಓದಿಕೊಳ್ಳಲಿ: ಸಂಸದ ಪ್ರತಾಪ ಸಿಂಹ ವಾಗ್ದಾಳಿ

ಗಣರಾಜ್ಯೋತ್ಸವದ ಸ್ಥಬ್ಧಚಿತ್ರಗಳ ಆಯ್ಕೆ ಮಾರ್ಗ ಸೂಚಿ ಓದಿಕೊಳ್ಳಲಿ: ಸಂಸದ ಪ್ರತಾಪ ಸಿಂಹ ವಾಗ್ದಾಳಿ

ಮೈಸೂರು: ಸಮಾಜ ಸುಧಾರಕ ನಾರಾಯಣ ಗುರುಗಳ ಸ್ಥಬ್ಧಚಿತ್ರಕ್ಕೆ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಅವಕಾಶ ಸಿಗಲಿಲ್ಲವೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶಗೊಂಡಿರುವುದಕ್ಕೆ ಸಂಸದ ಪ್ರತಾಪ ಸಿಂಹ ತಿರುಗೇಟು ನೀಡಿದ್ದಾರೆ. ಕಾಮಾಲೆ ಕಣ್ಣಿಗೆ ನೋಡುವುದೆಲ್ಲಾ ಹಳದಿ ಎಂಬಂತಾಗಿದೆ ಸಿದ್ದರಾಮಯ್ಯ ಅವರ ವರ್ತನೆ. ರಾಜ್ಯದಲ್ಲಿ ಕ್ಯಾಂಟಿನ್ ಗೆ ಹೆಸರಿಡುವಾಗ ಈ ನೆಲದ ಮಹಾ ಪುರುಷರ ಹೆಸರು ಅವರಿಗೆ ನೆನಪಾಗಲಿಲ್ಲ. ಸಿದ್ದರಾಮಯ್ಯಗೆ ಆಗ ನೆನಪಾಗಿದ್ದು ಇಂದಿರಾ ಗಾಂಧಿ ಹೆಸರು ಮಾತ್ರ. ಅಧಿಕಾರದಲ್ಲಿ ಇರುವಾಗ ಅವರಿಗೆ ಮಹಾನೀಯರು ನೆನಪಾಗುವುದಿಲ್ಲ. ಅಧಿಕಾರ ಹೋದ ಮೇಲೆ ಮಹಾನೀಯರು ನೆನಪಾಗುತ್ತಾರೆ ಎಂದು ಕಿಡಿಕಾರಿದ್ದಾರೆ.

ನಾರಾಯಣ ಗುರುಗಳು, ಒನಕೆ ಓಬವ್ವ, ಮೈಸೂರು ಮಹಾರಾಜರು ಎಂದಿಗೂ ಸಿದ್ದರಾಮಯ್ಯಗೆ ಅಧಿಕಾರದಲ್ಲಿ ಇದ್ದಾಗ ನೆನಪಾಗಲಿಲ್ಲ. ಈಗ ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಮಹಾನೀಯರಿಗೆ ಗೌರವ ಕೊಡುವುದನ್ನು ನಮಗೆ ಹೇಳುತ್ತಿದ್ದಾರೆ. ಗಣರಾಜ್ಯೋತ್ಸವದಲ್ಲಿ ಒಂದು ವಿಷಯ ಕೊಟ್ಟಿದ್ದಾರೆ. ಆ ವಿಷಯಕ್ಕೆ ಅನುಗುಣವಾಗಿ ಯಾರು ಸ್ತಬ್ಧಚಿತ್ರ ಮಾಡಿರುತ್ತಾರೋ ಗುಣಮಟ್ಟದ ಆಧಾರದ ಮೇಲೆ ಅದರ ಆಯ್ಕೆ ಆಗುತ್ತದೆ. ಆಯ್ಕೆ ಪ್ರಕ್ರಿಯೆ ಪಾರದಾರ್ಶಕವಾಗಿರುತ್ತೆ. ಇಲ್ಲಿ ಯಾರ ಅವಮಾನದ ಪ್ರಶ್ನೆಯೂ ಇರುವುದಿಲ್ಲ. ಸಿದ್ದರಾಮಯ್ಯ ಅವರು ಮೊದಲು ಗಣರಾಜ್ಯೋತ್ಸವದ ಸ್ಥಬ್ಧಚಿತ್ರಗಳ ಆಯ್ಕೆ ಮಾರ್ಗ ಸೂಚಿ ಓದಿಕೊಳ್ಳಲಿ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ ಸಿಂಹ ವಾಗ್ದಾಳಿ ನಡೆಸಿದ್ದಾರೆ.