ಮೈಸೂರು,ಆಗಸ್ಟ್ 12 :- ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನೆಲೆ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಆಗಸ್ಟ್ 13 ಹಾಗೂ 20 ರಂದು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು ಆದೇಶ ಹೊರಡಿಸಿದ್ದಾರೆ.
ನಿಷೇಧಿತ ದಿನಾಂಕಗಳಂದು ಪೂರ್ತಿದಿನ ಹಾಗೂ ಇತರೆ ದಿನಗಳಂದು ಸಂಜೆ 6 ಗಂಟೆಯ ನಂತರ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ನಡೆಯುವ ಧಾರ್ಮಿಕ ಆಚರಣೆಯನ್ನು ಹೊರತುಪಡಿಸಿ ದೇವಾಲಯಕ್ಕೆ ಬರುವ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.
ದೇವಾಲಯದ ಸಂಪ್ರದಾಯದಂತೆ ಜರುಗುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ದೇವಾಲಯದ ಅಧಿಕಾರಿಗಳು, ಅರ್ಚಕರು, ಸಿಬ್ಬಂದಿಗಳು ಮಾತ್ರ ನಡೆಸಲು ಅನುಮತಿ ನೀಡಲಾಗಿದೆ. ದೇವಾಲಯದಲ್ಲಿ ದೇವಾಲಯದ ವತಿಯಿಂದಾಗಲಿ ಅಥವಾ ದಾನಿಗಳ ವತಿಯಿಂದಾಗಲೀ ದಾಸೋಹ ಊಟದ ವ್ಯವಸ್ಥೆ ಹಾಗೂ ಪ್ರಸಾದ ವಿತರಣೆಯನ್ನು ನಿಷೇಧಿಸಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರವು ಘೋಷಿಸಿರುವ ಶಿಷ್ಟಾಚಾರ ವ್ಯವಸ್ಥೆ ಹೊಂದಿರುವ ಗಣ್ಯ ವ್ಯಕ್ತಿಗಳು ಸರ್ಕಾರಿ ಕೆಲಸದ ನಿಮಿತ್ತ ತೆರಳುವ ಅಧಿಕಾರಿಗಳು, ತುರ್ತು ಸೇವಾ ವಾಹನಗಳು ಹಾಗೂ ಚಾಮುಂಡಿಬೆಟ್ಟದ ಗ್ರಾಮಸ್ಥರನ್ನು ಹೊರತುಪಡಿಸಿ ಇತರೆ ಸಾರ್ವಜನಿಕ ವಾಹನಗಳಿಗೆ ಪ್ರವೇಶವಿರುವುದಿಲ್ಲ.
ಚಾಮುಂಡಿ ಬೆಟ್ಟ ಗ್ರಾಮಸ್ಥರು ನಿಷೇಧಿತ ದಿನಾಂಕಗಳಂದು ಪೂರ್ತಿದಿನ ಹಾಗೂ ಇತರೆ ದಿನಗಳಂದು ಸಂಜೆ 6 ಗಂಟೆಯ ನಂತರ ವಾಹನ ಬಳಸುವ ಅನಿವಾರ್ಯವಿದ್ದಲ್ಲಿ ಚಾಮುಂಡಿ ಬೆಟ್ಟದ ವಾಸಸ್ಥಳ ಗುರುತಿನ ಚೀಟಿಯನ್ನು ಬಳಸಬಹುದು.
ದೇವಾಲಯದಲ್ಲಿ ನಡೆದು ಬಂದಿರುವ ಸಂಪ್ರದಾಯ ಮತ್ತು ಪದ್ಧತಿಯಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬೇಕಾಗಿರುವುದರಿಂದ ಇದಕ್ಕೆ ಅಗತ್ಯವಿರುವವರು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಿಸಲ್ಪಟ್ಟ ಶಿಷ್ಟಾಚಾರ ವ್ಯವಸ್ಥೆ ಹೊಂದಿರುವ ಗಣ್ಯ ವ್ಯಕ್ತಿಗಳು ಹಾಗೂ ಚಾಮುಂಡಿಬೆಟ್ಟದ ಗ್ರಾಮಸ್ಥರು ಮಾತ್ರ ದೇವಾಲಯದಲ್ಲಿ ನಡೆಯುವ ಪೂಜಾ ಕೈಂಕರ್ಯಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ದೇವಾಲಯದ ರೂಢಿ ಸಂಪ್ರದಾಯದಂತೆ ಮಂಗಳಾರತಿಯು ಮುಕ್ತಾಯಗೊಂಡ ತಕ್ಷಣ ದೇವಾಲಯದ ಬಾಗಿಲನ್ನು ಮುಚ್ಚಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.