ಚಾಮರಾಜನಗರ: ರಾಷ್ಟ್ರೀಯ ಸ್ವಚ್ಚತಾ ಫಿಲ್ಮೋಂ ಕಾ ಅಮೃತ್ ಮಹೋತ್ಸವ (ಅಜಾದ್ ಕಾ ಅಮೃತ್ ಮಹೋತ್ಸವ) ಕುರಿತು ರಾಷ್ಟ್ರ ಮಟ್ಟದ ಕಿರುಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಸಾರ್ವಜನಿಕವಾಗಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಜಲಶಕ್ತಿ ಮಂತ್ರಾಲಯದ ಸಹಯೋಗದೊಂದಿಗೆ ಸ್ವಚ್ಚ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ.
ಗ್ರಾಮೀಣ ಜನರಲ್ಲಿ ಸಾಮೂಹಿಕ ಜಾಗೃತಿ ಮೂಡಿಸುವ ಹಾಗೂ ವ್ಯಕ್ತಿಗಳು ಮತ್ತು ಸಂಸ್ಥೆಗಳ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಮೂಲಕ ಓಡಿಎಫ್ ಪ್ಲಸ್ ಘಟಕಾಂಶಗಳ ಕುರಿತು ಕಿರುಚಿತ್ರಗಳ ಸ್ವರೂಪದಲ್ಲಿ ಅವರ ವಿವಿಧ ಆಲೋಚನೆಗಳು ಮತ್ತು ಸೃಜನಶೀಲತೆಯನ್ನು ಸೆರೆಹಿಡಿಯಲು ಸಹಕಾರಿಯಾಗುವ ಹಿನ್ನೆಲೆಯಲ್ಲಿ 2021ರ ಏಪ್ರಿಲ್ 16 ರಿಂದ ಆಗಸ್ಟ್ 15ರವರೆಗೆ ರಾಷ್ಟ್ರೀಯ ಸ್ವಚ್ಚತಾ ಫಿಲ್ಮೋಂ ಕಾ ಅಮೃತ್ ಮಹೊತ್ಸವ (ಅಜಾದ್ ಕಾ ಅಮೃತ್ ಮಹೋತ್ಸವ) ಎಂಬ ಹೆಸರಿನಡಿ ಏರ್ಪಡಿಸಲಾಗಿರುವ ರಾಷ್ಟ್ರೀಯ ಕಿರುಚಿತ್ರ ಸ್ಪರ್ಧೆಯು 2 ವಿಭಾಗಗಳಲ್ಲಿ ಸ್ಪರ್ಧೆಗೆ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರು ಮತ್ತು ಪಿಎಂಯು ಸದಸ್ಯರು ಮತ್ತು ಅವರ ಸಂಬಂಧಿಕರನ್ನು ಹೊರತುಪಡಿಸಿ, 10 ವರ್ಷ ಮೇಲ್ಪಟ್ಟ ಎಲ್ಲಾ ಭಾರತೀಯ ನಾಗರಿಕರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸಾಂಸ್ಥಿಕ ವಿಭಾಗದಲ್ಲಿ ಗ್ರಾಮ ಪಂಚಾಯತಿಗಳು, ಸಮುದಾಯ ಆಧಾರಿತ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಹಾಗೂ ಸ್ವ-ಸಹಾಯ ಸಂಘ ಸಂಸ್ಥೆಗಳು ಕಿರುಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಹೊಂದಿರುತ್ತಾರೆ.
ಸ್ವಚ್ಚಭಾರತ್ ಮಿಷನ್ ಯೋಜನೆ ಹಂತ 2ರ ಘಟಕಾಂಶಗಳ ಕುರಿತು ಎರಡು ವಿಭಾಗಗಳಲ್ಲಿ ಕಿರುಚಿತ್ರಗಳನ್ನು ತಯಾರಿಸಬೇಕು. ಒಂದನೇ ವರ್ಗದಲ್ಲಿ ಸ್ವಚ್ಚ ಭಾರತ್ ಮಿಷನ್ ಯೋಜನೆಯ ಹಂತ 2 ಆರು ಘಟಕಾಂಶಗಳನ್ನು ಆಧರಿಸಿದೆ. ಜೈವಿಕ ವಿಘಟನೆಯ ತ್ಯಾಜ್ಯ ನಿರ್ವಹಣೆ, ಗೋಬರ್ಧನ್, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ, ಬೂದು ನೀರು ನಿರ್ವಹಣೆ, ಮಲ ತ್ಯಾಜ್ಯ ನಿರ್ವಹಣೆ, ನಡವಳಿಕೆ ಬದಲಾವಣೆ ವಿಷಯಗಳ ಕುರಿತು ಕಿರುಚಿತ್ರಗಳನ್ನು ತಯಾರಿಸಬೇಕು. ಪ್ರತಿ ವಿಷಯಕ್ಕೂ 3 ಬಹುಮಾನಗಳನ್ನು ನೀಡಲಾಗುವುದು. ಒಬ್ಬ ವ್ಯಕ್ತಿ, ಸಂಸ್ಥೆಗಳು ಹಲವು ಕಿರುಚಿತ್ರಗಳನ್ನು ತಯಾರಿಸಿ ಸಲ್ಲಿಸಬಹುದು ಇದಕ್ಕೆ ಯಾವುದೇ ಮಿತಿಯಿರುವುದಿಲ್ಲ. ಪ್ರತಿ ವಿಷಯಕ್ಕೂ ಪ್ರಥಮ ಬಹುಮಾನವಾಗಿ 1 ಲಕ್ಷದ 60 ಸಾವಿರ ರೂ, ಪ್ರಥಮ ರನ್ನರ್ ಅಪ್ ಬಹುಮಾನವಾಗಿ 60 ಸಾವಿರ ರೂ, ಎರಡನೇ ರನ್ನರ್ ಅಪ್ ಬಹುಮಾನವಾಗಿ 30 ಸಾವಿರ ರೂ ನಗದು ಬಹುಮಾನಗಳನ್ನು ನೀಡಲಾಗುತ್ತದೆ.

ಎರಡನೇಯ ವರ್ಗವು ಸಂಪೂರ್ಣವಾಗಿ ಭೌಗೋಳಿಕ ಭೂ ಪ್ರದೇಶದ ಮೇಲೆ ಕೇಂದ್ರಿಕರಿಸಿದೆ. ಈ ವಿಭಾಗದಲ್ಲಿನ ಕಿರು ಚಿತ್ರವು ಸಮಗ್ರ ಸ್ವಚ್ಚತಾ ಸಂದೇಶಗಳನ್ನು ಸೆರೆಹಿಡಿಯಬೇಕು ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ, ದ್ರವತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ನವೀನ ಪರಿಹಾರಗಳನ್ನು ಒದಗಿಸಬೇಕು. ಈ ಎರಡು ವರ್ಗಗಳಲ್ಲಿನ ಕಿರುಚಿತ್ರಗಳು ಗ್ರಾಮೀಣ ಸೊಗಡಿನಲ್ಲಿರಬೇಕು.
ಮರುಭೂಮಿ ಪ್ರದೇಶಗಳು, ಗುಡ್ಡಗಾಡು ಪ್ರದೇಶಗಳು, ಕರಾವಳಿ ಪ್ರದೇಶಗಳು, ಬಯಲು ಸೀಮೆ, ಪ್ರವಾಹ ಪೀಡಿತ ಪ್ರದೇಶಗಳ ಕುರಿತು ಯಾವುದಾದರು ಒಂದು ವಿಷಯವನ್ನು ಆರಿಸಿಕೊಳ್ಳಬಹುದು ಅಥವಾ ಐದು ಭೌಗೋಳಿಕ ಪ್ರದೇಶಗಳಲ್ಲಿ ಯಾವುದನ್ನಾದರೂ ಕೇಂದ್ರಿಕರಿಸಿ ಅನೇಕ ಚಲನಚಿತ್ರಗಳನ್ನು ತಯಾರಿಸಿ ಸಲ್ಲಿಸಬಹುದಾಗಿದೆ. ಎರಡನೇ ಹಂತದಲ್ಲೂ ಸಹ ಪ್ರತಿ ವಿಷಯಕ್ಕೆ 3 ಬಹುಮಾನಗಳಿದ್ದು, ಪ್ರಥಮ ಬಹುಮಾನವಾಗಿ 2 ಲಕ್ಷ ರೂ, ಪ್ರಥಮ ರನ್ನರ್ ಅಪ್ ಬಹುಮಾನವಾಗಿ 1 ಲಕ್ಷದ 20 ಸಾವಿರ ರೂ, ಎರಡನೇ ರನ್ನರ್ ಅಪ್ ಬಹುಮಾನವಾಗಿ 80 ಸಾವಿರ ರೂ ನಗದು ಬಹುಮಾನಗಳನ್ನು ನೀಡಲಾಗುತ್ತದೆ.
ಈ ವರ್ಷದ ಕೊನೆಯಲ್ಲಿ ನವದೆಹಲಿಯಲ್ಲಿ ನಡೆಯುವ ಸ್ವಚ್ಚ ಭಾರತ್ ಮಿಷನ್ ಯೋಜನೆಯ ಸಮಾರಂಭದಲ್ಲಿ ಈ ಎರಡು ವಿಭಾಗಗಳಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.

ಚಲನಚಿತ್ರದ ಅವಧಿ 1 ರಿಂದ 5 ನಿಮಿಷಗಳ ನಡುವೆ ಇರಬೇಕು. ಮಾನ್ಯತೆ ಪಡೆದ ಎಲ್ಲಾ ಭಾರತೀಯ ಭಾಷೆಗಳಲ್ಲಿ ಚಲನಚಿತ್ರ, ಕಿರುಚಿತ್ರಗಳನ್ನು ತಯಾರಿಸಲು ಅರ್ಹವಾಗಿವೆ. ಗ್ರಾಮೀಣ ಪ್ರದೇಶದ ವಿಷಾಯಾಧಾರಿತ ಕಿರುಚಿತ್ರಗಳನ್ನು ಮಾತ್ರ ಈ ಸ್ಪರ್ಧೆಯಲ್ಲಿ ಸ್ವೀಕರಿಸಲಾಗುತ್ತದೆ.
ಪ್ರಶಸ್ತಿ ಪುರಸ್ಕಾರಕ್ಕಾಗಿ ಸಲ್ಲಿಸಲಾಗುವ ಕಿರುಚಿತ್ರ ತಯಾರಿಸಿರುವ ಕುರಿತು ಸ್ವಯಂ ದೃಢೀಕರಣ ಮಾಡಬೇಕು. ಕಿರುಚಿತ್ರ, ಚಲನಚಿತ್ರವು ಸ್ಪಷ್ಟ ಹಿನ್ನಲೆ ಧ್ವನಿ, ಸಂಭಾಷಣೆ, ಸಂಗೀತ, ಹಾಡು ಇತ್ಯಾದಿಗಳನ್ನು ಹೊಂದಿರಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಕಿರುಚಿತ್ರ ತಯಾರಿಕೆಯಲ್ಲಿ ಸ್ಥಳೀಯ ಭೌಗೋಳಿಕತೆ, ಸಮಸ್ಯೆಗಳು, ವಿಷಯಗಳು, ಸಂಗೀತ, ಜಾನಪದ ಇತ್ಯಾದಿಗಳನ್ನು ಬಳಸುವುದನ್ನು ಪರಿಗಣಿಸಲಾಗುವುದು.
ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪೋರ್ಟಲ್‌ನಲ್ಲಿ ಕಿರುಚಿತ್ರ ಸ್ಪರ್ಧೆಯ ಪ್ರಶಸ್ತಿಗೆ ನೋಂದಾಯಿಸುವವರು ತಮ್ಮ ಹೆಸರು, ದೂರವಾಣಿ ಸಂಖ್ಯೆ, ವಿಷಯ, ವರ್ಗದ ಸ್ಪಷ್ಟ ವಿವರವನ್ನು ಹೊಂದಿರಬೇಕು. ಆಸಕ್ತರು ತಾವು ತಯಾರಿಸಿದ ಕಿರುಚಿತ್ರ, ಚಲನಚಿತ್ರಗಳನ್ನು ತಮ್ಮ ಅಧಿಕೃತ ಕ್ರಿಯಾತ್ಮಕ ಇ-ಮೇಲ್ ಐಡಿಯಿಂದ ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಬೇಕು. ನಂತರ ಕೇಂದ್ರ ಸರ್ಕಾರದ www.mygov.in.link ನಲ್ಲಿ ಲಾಗಿನ್ ಆಗಿ ತಮ್ಮ ಸ್ವಯಂ ವಿವರವನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಬೇಕು ಮತ್ತು ಕಿರುಚಿತ್ರವನ್ನು ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾದ ಲಿಂಕ್‌ನ್ನು ದಾಖಲಿಸಬೇಕಾಗುತ್ತದೆ.