ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾದ ಮಂಡ್ಯ ಜಿಲ್ಲೆಯ ದ್ವೀಪನಗರಿ ಶ್ರೀರಂಗಪಟ್ಟಣದ ಸುತ್ತ ಒಂದು ನೋಟ…..
ಕೊಡಗಿನಲ್ಲಿ ಹುಟ್ಟಿ ಕುಣಿಯುತ, ನಲಿಯುತ, ನಿನದವಾಡುತ್ತಾಜೀವದ್ರವ್ಯವಾಗಿ ಹರಿದು ಬರುವಕನ್ನಡನಾಡಿನಜೀವನದಿ ಕಾವೇರಿಯು ಮಂಡ್ಯದಿಂದ 30 ಕಿ.ಮೀ. ದೂರದಲ್ಲಿಎರಡು ಹೋಳಾಗಿ ಪಟ್ಟಣದ ಸುತ್ತ ವೈಯ್ಯಾರದಿಂದ ನಡೆದುಇಡೀ ಪಟ್ಟಣವನ್ನುಆವೃತ್ತಗೊಂಡುಒಂದುಚೆಂದದ ದ್ವೀಪವಾಗಿಸಿದ್ದಾಳೆ. ಅದೇಐತಿಹಾಸಿಕ ಮಹತ್ವದ, ಪೌರಾಣಿಕ ಹಿನ್ನೆಲೆಯ ದ್ವೀಪನಗರಿ ಶ್ರೀರಂಗಪಟ್ಟಣ. ಈ ಹೆಸರು ಕೇಳಿದಾಕ್ಷಣ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಟಿಪ್ಪು ಸುಲ್ತಾನ್ ನೆನಪಾಗುತ್ತಾನೆ. ಟಿಪ್ಪು ಬಾಳಿ ಬದುಕಿದ್ದ, ಬ್ರಿಟಿಷರೊಡನೆ ಧೀರತನದಿಂದ ಹೋರಾಡಿ ಹುತಾತ್ಮನಾದ ವೀರಭೂಮಿಯಿದು. ಮೈಸೂರು ಅರಸರು ಆಳಿದ ಭವ್ಯ ನೆಲವಿದು.ಈ ದ್ವೀಪನಗರ ಶ್ರೀರಂಗಪಟ್ಟಣ ಧಾರ್ಮಿಕವಾಗಿ, ಚಾರಿತ್ರಿಕವಾಗಿ, ಪೌರಾಣಿಕವಾಗಿ ನಾನಾ ಘಟನಾವಳಿಗಳಿಂದ ಮಹತ್ವ ಪಡೆದುಕೊಂಡಿದೆ. ವಿಶೇಷವಾಗಿ ಸ್ವಾತಂತ್ರ್ಯಪೂರ್ವದ ಭಾರತದ ಇತಿಹಾಸದಲ್ಲಿ ಇದು ಪ್ರಾಮುಖ್ಯತೆಗಳಿಸಿದೆ. ಇಡೀ ಭಾರತವನ್ನು ಕಬಳಿಸುತ್ತಿದ್ದ ಬ್ರಿಟಿಷರಿಗೆಇದು ಭೇದಿಸಲಾಗದ ಉಕ್ಕಿನ ಕೋಟೆಯಾಗಿತ್ತು. ಇದನ್ನು ವಶಪಡಿಸಿಕೊಳ್ಳಲು ಬ್ರಿಟಿಷರು ತಮ್ಮೆಲ್ಲಾ ಸರ್ವ ಪ್ರಯತ್ನಗಳ ಜೊತೆಗೆ ನಾಲ್ಕು ಬಾರಿ ದಂಡೆತ್ತಿ ಬಂದು ಯುದ್ದಕ್ಕೆ ನಿಂತು ಬೆವರು ಸುರಿಸಿ ರಕ್ತಹರಿಸಬೇಕಾಯಿತು.

ಪೌರಾಣಿಕವಾಗಿ ‘ಆದಿರಂಗ’ ಎಂದೂ, ಚಾರಿತ್ರಿಕವಾಗಿ ‘ಅಷ್ಟಗ್ರಾಮ’ ಎಂದೂಕರೆಯಲ್ಪಟ್ಟಿರುವ ಶ್ರೀರಂಗಪಟ್ಟಣವು ಕಾವೇರಿ ನದಿಯಿಂದ ನಿರ್ಮಿತವಾದ ನಯನ ಮನೋಹರ ದ್ವೀಪವಾಗಿದ್ದು ಪಶ್ಚಿಮದಿಂದ ಪೂರ್ವಕ್ಕೆ ಸುಮಾರು 3 ಮೈಲಿಗಳಷ್ಟು ಉದ್ದ ಮತ್ತುಉತ್ತರ-ದಕ್ಷಿಣವಾಗಿಒಂದು ಮೈಲಿಯಷ್ಟು ಅಗಲವನ್ನು ಹೊಂದಿದೆ. ಶ್ರೀರಂಗಪಟ್ಟಣವನ್ನು ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನನ ಸಹೋದರಉದಯಾದಿತ್ಯನುಕ್ರಿ.ಶ. 1120ರಲ್ಲಿ ನಿರ್ಮಿಸಿದ್ದರೆ, ಕ್ರಿ.ಶ. 1454ರಲ್ಲಿ ನಾಗಮಂಗಲದದೊರೆತಿಮ್ಮಣ್ಣನೆಂಬುವನು ಶ್ರೀರಂಗಪಟ್ಟಣಕ್ಕೆ ಸುತ್ತಲೂಕೋಟೆಯನ್ನು ಕಟ್ಟಿಸಿದ್ದಾನೆ. ನಾಲ್ಕು ದ್ವಾರಗಳಿಂದ ಪಟ್ಟಣವನ್ನು ಸುತ್ತುವರಿದಿರುವ ಈ ಬಲವಾದ ಕೋಟೆ ಭಾರತದ ಎರಡನೇಅತ್ಯಂತ ಬಲಿಷ್ಠ ಕೋಟೆಯೆಂದು ಪರಿಗಣಿತವಾಗಿದೆ. ವಿಜಯನಗರದರಸರ ಆಳ್ವಿಕೆಗೂ ಒಳಪಟ್ಟಿದ್ದ ಇದುಅವರ ಸಾಮಂತ ಶ್ರೀರಂಗರಾಯನ ನಂತರ 1610ರಲ್ಲಿ ಮೈಸೂರರಸರ ಕೈವಶವಾಗಿತ್ತು. ಆಗವರ ರಾಜಧಾನಿಯಾಗಿ ಬಹು ವೈಭವದಿಂದ ಮಿಂಚಿತ್ತು. ಟಿಪ್ಪುವಿನ ಮರಣಾನಂತರ ಬ್ರಿಟಿಷರ ಅಧಿಪತ್ಯಕೊಳ್ಳಪಟ್ಟ ಶ್ರೀರಂಗಪಟ್ಟಣ ತನ್ನರಾಜಧಾನಿ ಪಟ್ಟವನ್ನು ಮೈಸೂರಿಗೆ ಬಿಟ್ಟುಕೊಟ್ಟಿತ್ತು.
ಹೀಗೆ ಒಂದು ಕಾಲದಲ್ಲಿಉತ್ತುಂಗ ಸ್ಥಿತಿಯಲ್ಲಿದ್ದ ಚಾರಿತ್ರಿಕ ಹಿರಿಮೆಯ, ಪೌರಾಣಿಕಗರಿಮೆಯ ಶ್ರೀರಂಗಪಟ್ಟಣ ಇಂದಿಗೂ ತನ್ನಗತವೈಭವವನ್ನು ಸಾರುತ್ತಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿದೆ.ಒಂದೇಕಡೆ ಕೆಲವೇ ಕಿ.ಮೀ. ಗಳ ಅಂತರದಲ್ಲಿ ಹಲವಾರುಅದ್ಭುತ ಸ್ಥಳಗಳನ್ನು ಪ್ರವಾಸಿಗರು ಪ್ರಯಾಸವಿಲ್ಲದೆ ವೀಕ್ಷಿಸಬಹುದಾದಒಂದುಅಪೂರ್ವ ದ್ವೀಪ ಪಟ್ಟಣವಿದು.

ಇಲ್ಲಿ ಪುರಾಣೇತಿಹಾಸ ಪ್ರಸಿದ್ಧ ಗಗನ ಚುಂಬಿಸುವ ಬೃಹತ್ ರಾಜಗೋಪುರವುಳ್ಳ ಕ್ರಿ.ಶ. 894ರಲ್ಲಿ ಗಂಗರತಿರುಮಲೈ ಕಟ್ಟಿಸಿದನೆಂಬ ಐತಿಹ್ಯವಿರುವ ಮಲಗಿರುವ ಶ್ರೀರಂಗನಾಥಸ್ವಾಮಿ ದೇವಸ್ಥಾನ ಸೇರಿದಂತೆ ಶ್ರೀ ಲಕ್ಷ್ಮೀನರಸಿಂಹಸ್ವಾಮಿ, ಶ್ರೀ ಅಯ್ಯಪ್ಪಸ್ವಾಮಿ, ಶ್ರೀ ಜನಾರ್ಧನಸ್ವಾಮಿ, ಶ್ರೀ ಜ್ಯೋತಿರ್ಮಹೇಶ್ವರಿ, ಶ್ರೀ ವಿಘ್ನೇಶ್ವರ, ಶ್ರೀ ನಗರೇಶ್ವರ, ಶ್ರೀ ಆಂಜನೇಯಸ್ವಾಮಿ, ಶ್ರೀ ಸುಬ್ರಹ್ಮಣ್ಯಸ್ವಾಮಿ, ಶ್ರೀ ಗೋಪಾಲಕೃಷ್ಣಸ್ವಾಮಿ, ಶಕ್ತಿದೇವತೆಗಳಾದ ಶ್ರೀ ಅಂಕಾಳಮ್ಮ, ಶ್ರೀ ಮಾರಮ್ಮ, ಶ್ರೀ ಕಾಳಮ್ಮ ಮುಂತಾದ ದೇವಾನುದೇವತೆಗಳ ಸಾಲು ಸಾಲು ದೇವಾಲಯಗಳನ್ನು ಕಾಣಬಹುದು. ಹಾಗೆಯೇ ಶತಕೋಟಿರಾಮಮಂದಿರ, ಕಾವೇರಿತೀರದಲ್ಲಿರುವ ಪ್ರಸಿದ್ಧ ಸಾಯಿಮಂದಿರ, ಉತ್ತರಾಧಿಮಠ, ರಾಘವೇಂದ್ರಮಠ, ಯತಿರಾಜಮಠಇತ್ಯಾದಿ ಮಠ ಮಾನ್ಯಗಳು, ಮಂದಿರಗಳು, ಜೈನ ಬಸದಿಗಳುಇಲ್ಲಿಯತೇಚ್ಛವಾಗಿವೆ.
ಟಿಪ್ಪು ಪ್ರಾರ್ಥನೆ ಮಾಡುತ್ತಿದ್ದ 1781ರಲ್ಲಿ ನಿರ್ಮಾಣಗೊಂಡಿರುವಆಕಾಶಮುಟ್ಟುವ ನೂರಡಿಎತ್ತರದಆಕರ್ಷಕವಾದಎರಡು ಮಿನಾರುಗಳುಳ್ಳ ಐತಿಹಾಸಿಕ ‘ಜುಮ್ಮಾ ಮಸೀದಿ’, ದೂರದ ಸ್ಥಳಗಳನ್ನು ವೀಕ್ಷಿಸಲುಟಿಪ್ಪು ಬಳಸುತ್ತಿದ್ದ ಬಹು ಎತ್ತರದ ‘ಬತೇರಿ’, ಬ್ರಿಟಿಷರನ್ನು ಮತ್ತು ಮತ್ತಿತರೇತನ್ನ ವೈರಿಗಳನ್ನು ಟಿಪ್ಪು ಬಂಧಿಸುತ್ತಿದ್ದ ನೆಲಮಾಳಿಗೆಯ ಬಂದೀಖಾನೆಯಾದ ‘ಬೇಲಿಡಂಜನ್’, ಇದರ ಮಧ್ಯದಲ್ಲಿರುವ ಹತ್ತು ಅಡಿ ಉದ್ದದಟಿಪ್ಪುಕಾಲದ ‘ಫಿರಂಗಿ’, ಇದರ ಹತ್ತಿರದಲ್ಲೇಇರುವ ಮೈಸೂರಿನ ನಾಲ್ಕನೇ ಮಹಾಯುದ್ಧದಲ್ಲಿ ಹೋರಾಡಿ ಮಡಿದ ಸೈನಿಕರನ್ನು ಸ್ಮರಿಸುವ ‘ಸೈನಿಕ ಸ್ತಂಭ’, ಕಾವೇರಿ ನದಿಯಎಡಕವಲಿಗೆಅಡ್ಡವಾಗಿ ನಿರ್ಮಿಸಿರುವ ಕರ್ನಾಟಕದಅತ್ಯಂತ ಪ್ರಾಚೀನ ಸೇತುವೆಯಾದ ‘ವೆಲ್ಲೆಸ್ಲಿ ಸೇತುವೆ’, 1784ರಲ್ಲಿ ಕಟ್ಟಲ್ಪಟ್ಟಿರುವ 1959ರಿಂದ ವಸ್ತು ಸಂಗ್ರಹಾಲಯವಾಗಿರುವ ಟಿಪ್ಪುವಿನ ಅಂದದ ಬೇಸಿಗೆ ಅರಮನೆ ‘ದರಿಯಾದೌಲತ್’, ಟಿಪ್ಪು ಸುಲ್ತಾನ್ ಮತ್ತುಆತನತಂದೆ-ತಾಯಿ ಮತ್ತವರಕುಟುಂಬದವರ ಸಮಾಧಿಗಳಿರುವ 1784ರಲ್ಲಿ ನಿರ್ಮಾಣಗೊಂಡಿರುವ ಗೋಳಗುಮ್ಮಟದಾಕಾರದ ‘ಗುಂಬಜ್’ ಇಲ್ಲೇ ಸಮೀಪದಲ್ಲಿಕಾವೇರಿ ನದಿ ಇಬ್ಭಾಗವಾಗಿಒಡೆದು ಮುಂದೆ ಸಾಗಿ ಒಂದಾಗಿ ಸೇರುವ‘ಸಂಗಮ’, ಅಲ್ಲೇ ಸಮೀಪದಲ್ಲಿರಮಣೀಯ ‘ಗೋಸಾಯಿ ಘಾಟ್’ ಇಲ್ಲೇ ಅನತಿ ದೂರದ ಕಾವೇರಿಯ ಉತ್ತರದಡದಲ್ಲಿರುವ ಗಂಜಾಂನ ಪ್ರಸಿದ್ಧ ‘ನಿಮಿಷಾಂಬ ದೇವಸ್ಥಾನ’ ತುಸುದೂರದಲ್ಲೇ ಇರುವ ಶ್ರೀರಾಮ, ಕಾಶಿವಿಶ್ವನಾಥ, ಕನ್ಯಕಾ ಪರಮೇಶ್ವರಿ, ಗೌರಿ ದೇಗುಲಗಳು ಹಾಗೂ ಫ್ರೆಂಚ್‌ನಕ್ರೈಸ್ತ ಪಾದ್ರಿ ಅಬ್ಬಿದುಬುವಾ ಸ್ಥಾಪಿಸಿರುವ ‘ಅಬ್ಬಿದುಬುವಾಚರ್ಚ್’ ಕಾವೇರಿ ನದಿಯ ಮಧ್ಯ ಭಾಗದಲ್ಲಿರುವ ವಿಶ್ವವಿಖ್ಯಾತ ‘ರಂಗನತಿಟ್ಟು ಪಕ್ಷಿಧಾಮ’, ನಂದಿ ಬಸಪ್ಪಛತ್ರ, ಅಂಡಾಪುರದರಂಗಾಚಾರ್ಯಛತ್ರ, ಗಾಡಿಚೆಲುವರಾಯಶೆಟ್ಟಿಛತ್ರ, ಮಹಾರಾಜರ ಛತ್ರಗಳು ಹೀಗೆ ಹಲವಾರು ಛತ್ರಗಳ ಪುಣ್ಯ ಸಂಗಮವೇ ಆಗಿರುವ ‘ಪಶ್ಚಿಮವಾಹಿನಿ’ ಮುಂತಾದವು ಶ್ರೀರಂಗಪಟ್ಟಣದಲ್ಲಿ ಪ್ರವಾಸಿಗರು ನೋಡಲೇ ಬೇಕಾದ ಭವ್ಯ ತಾಣಗಳು, ದಿವ್ಯ ತಾಣಗಳೂ ಹೌದು.

ಹಾಗೆಯೇ ಇಲ್ಲಿಂದ ಕೇವಲ ೪ ಕಿ.ಮೀ. ಅಂತರದಲ್ಲಿ ಬನ್ನೂರುರಸ್ತೆಯಲ್ಲಿರುವ ‘ಕರಿಘಟ್ಟಗಿರಿಧಾಮ’, ಅಲ್ಲೇತುಸುದೂರದಲ್ಲಿಇತ್ತೀಚೆಗೆ ಬಹಳ ಪ್ರಸಿದ್ಧಿಗೆ ಬರುತ್ತಿರುವ ‘ಗೆಂಡೆಹೊಸಹಳ್ಳಿ ಪಕ್ಷಿಧಾಮ’ (ಬಂಡಿಸಿದ್ದೇಗೌಡ ಪಕ್ಷಿಧಾಮ) ಇದರ ಸಮೀಪದಲ್ಲೇ ‘ಬೋರೇದೇವರಗುಡಿ’, ಚಿತ್ರನಗರಿಎಂದೇಖ್ಯಾತವಾಗಿರುವ ‘ಮಹದೇವಪುರ’ ದಂತಹರಮ್ಯ ಸ್ಥಳಗಳು ಪ್ರವಾಸಿಗರನ್ನು ಮಂತ್ರ ಮುಗ್ಧಗೊಳಿಸುತ್ತವೆ. ಎಲ್ಲಕ್ಕಿಂತ ಮಿಗಿಲಾಗಿ ಇಲ್ಲಿಂದ ೧೫ಕಿ.ಮೀ.ದೂರದಲ್ಲಿರುವ ಲೋಕವಿಖ್ಯಾತ ‘ಕೃಷ್ಣರಾಜ ಸಾಗರ’ ವೀಕ್ಷಣೆಯಂತೂ ಭೂ ಲೋಕದ ಸ್ವರ್ಗವೇ ಸರಿ.
ಜಿಲ್ಲಾ ಕೇಂದ್ರ ಮಂಡ್ಯದಿಂದ 30 ಕಿ.ಮೀ. ಮೈಸೂರಿನಿಂದ 16 ಕಿ.ಮೀ. ರಾಜಧಾನಿ ಬೆಂಗಳೂರಿನಿಂದ 122 ಕಿ.ಮೀ. ದೂರದಲ್ಲಿರುವ ಶ್ರೀರಂಗಪಟ್ಟಣದಲ್ಲಿ ಉಳಿದುಕೊಳ್ಳಲು ಮತ್ತು ಊಟ-ತಿಂಡಿಗೆ ಎಲ್ಲಾ ಶ್ರೇಣಿಯ ಹೋಟೆಲ್‌ಗಳೂ ಇಲ್ಲುಂಟು. ಆಧುನಿಕ ಸೌಕರ್ಯಗಳುಳ್ಳ ‘ಯಂಗ್‌ಐಲ್ಯಾಂಡ್, ‘ಮಯೂರ ರಿವರ್ ವ್ಯೂ’, ‘ಬಾಲಾಜಿ ಗಾರ್ಡನ್’ ಇಲ್ಲಿವೆ. ಬಂದು ಹೋಗಲು ಇಲ್ಲಿಗೆ ಸಾರಿಗೆ ವ್ಯವಸ್ಥೆ ಉತ್ತಮವಾಗಿದೆ. ಇಲ್ಲಿಗೆ ಸಮೀಪದ ಸುತ್ತ ಮುತ್ತಲಿನ ಸ್ಥಳಗಳನ್ನು ವೀಕ್ಷಿಸಲು ಖಾಸಗಿ ವಾಹನಗಳನ್ನು ಇಲ್ಲಿಂದಲೇ ವ್ಯವಸ್ಥೆ ಮಾಡಿಕೊಳ್ಳಬಹುದು.
