ದಸರಾಗೆ ಬಂದ ಶ್ರೀರಾಮ ಪರಿವಾರ!

ಈ ವರ್ಷದ ಗೊಂಬೆ ಮನೆ ಪ್ರದರ್ಶನದಲ್ಲಿ ವಿಶೇಷ

ಮೈಸೂರು: ಶ್ರೀರಾಮ ಪುಷ್ಪಕ ವಿಮಾನದಲ್ಲಿ ಸೀತೆ, ಲಕ್ಷ್ಮಣ, ವಾನರ ಸೇನೆಯೊಂದಿಗೆ ಅಯೋಧ್ಯೆಗೆ ಹಿಂದಿರುಗುತ್ತಿರುವ ಅಪರೂಪದ ಸನ್ನಿವೇಶ ಮೈಸೂರಿನಲ್ಲಿ ನಿರ್ಮಾಣಗೊಂಡು ಜನರನ್ನು ಕೈಬೀಸಿ ಕರೆಯುತ್ತಿದೆ!

ಇದು ರಾಮ್‌ಸನ್ಸ್ ಕಲಾ ಪ್ರತಿಷ್ಠಾನ ಏರ್ಪಡಿಸಿರುವ 17ನೇ ವರ್ಷದ ಬೊಂಬೆ ಮನೆ ಪ್ರದರ್ಶನದ ವಿಶೇಷ. ದಸರಾ ಅಂಗವಾಗಿ ಏರ್ಪಡಿಸಿರುವ ಬೊಂಬೆ ಪ್ರದರ್ಶನದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚಿನ ಗೊಂಬೆಗಳು ನಮ್ಮ ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿವೆ.

ಬೊಂಬೆ ಸೋಪಾನದ ಮೇಲಿಡಲು ಯೋಗ್ಯವಾದ ಮೈಸೂರು ಚಾಮುಂಡೇಶ್ವರಿ, ಬೊಂಬೆ ಜಂಬೂಸವಾರಿಗಾಗಿ ಒಂಟೆ ಸಾರೋಟು, ವಿಶಿಷ್ಟ ಕೂಟದ ಗೊಂಬೆ ಮಾದರಿಯಲ್ಲಿ ಕೊದಂಡರಾಮ, ರಾಧಾಕೃಷ್ಣ, ಶಿವಪಾರ್ವತಿ, ಬ್ರಹ್ಮ-ಸರಸ್ವತಿ, ಲಕ್ಷ್ಮ-ನಾರಾಯಣ, ಚನ್ನಪಟ್ಟಣದ ಪಾರಂಪರಿಕ ಅರಗು-ತಿರುಗು ಶೈಲಿಯಲ್ಲಿ ರಚಿಸಲಾಗಿದೆ.

ಹಿರಿಯ ರಂಕಗರ್ಮಿ ಪ್ರಸನ್ನ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳಿಗೆ ಮೊಬೈಲ್ ಕೊಟ್ಟು ಕೆಟ್ಟ ಚಟವನ್ನು ನಾವೇ ಕಲಿಸಿದ್ದೆವೆ. ಮೂರ್‍ಹೊತ್ತು ಮೊಬೈಲ್ ನೋಡುತ್ತಿರುತ್ತಾರೆ. ಮೊಬೈಲ್‌ನಲ್ಲಿ ಕಚ್ಚಾಡುವ ಯಾಂತ್ರಿಕ ಗೊಂಬೆಗಳ ಜತೆಗೆ ಯಾಂತ್ರಿಕ ಚಿತ್ರಗಳನ್ನು ವೀಕ್ಷಿಸುತ್ತ ಸಂಪೂರ್ಣ ಒಳ್ಳೇಯ ಸಭ್ಯ ಹಿನ್ನಲೆ ಮರೆಯುತ್ತಿದ್ದಾರೆ ಎಂದು ತಿಳಿಸಿದರು.

ಪಾರಂಪರಿಕ ಗೊಂಬೆಗಳ ನೋಡಿದರೆ ಅಲ್ಲಿ ಕಾಣುವುದು ನಮ್ಮ ಸಾಧು ಸಂಧರು, ಕಾಯಕ ಪರಂಪರೆ, ಕೃಷಿ ಪರಂಪರೆ, ಪರಿಸರ, ನಿಜವಾದ ಸಹಜವಾದ ಪ್ರಕೃತವಾದ ದರ್ಶನವಾಗುತ್ತೆ. ಸಹಜವಾದ ಸಭ್ಯತೆ ದರ್ಶನವಾಗುತ್ತೆ. ಈ ಕೆಲಸ ದೊಡ್ಡ ರೀತಿಯಲ್ಲಿ ಆಗಬೇಕು. ನಮ್ಮ ಎಲ್ಲ ಮಕ್ಕಳಿಗೆ ಗೊಂಬೆಯಾಟದ ಸಭ್ಯತೆಯನ್ನು ಕಲಿಯುವಂತಾಗಬೇಕು ಎಂದು ಹಾರೈಸುತ್ತೇನೆ ಎಂದು ತಿಳಿಸಿದರು.

ಮೈಸೂರಿನ ರಾಮ್‌ಸನ್ಸ್ ಕಲಾ ಪ್ರತಿಷ್ಠಾನದವರು 5 ದಶಕಗಳಿಂದ ಗೊಂಬೆ ಮನೆಯನ್ನು ಸ್ಥಾಪಿಸಿ ಪಾರಂಪರಿಕ ಗೊಂಬೆಗಳ ಮಹತ್ವವನ್ನು ಮತ್ತೆ ಎತ್ತಿ ಹಿಡಿಯುವ ಕೆಲಸವನ್ನು ಮಾಡುತ್ತಿದ್ದಾರೆ. ಇದು ಮಹತ್ವದ ಕೆಲಸ. ಮೈಸೂರು ಶೈಲಿ ಚಿತ್ರಗಳನ್ನು ಸಂಗ್ರಹಿಸುವ, ಅದಕ್ಕೆ ಒಳ್ಳೇಯ ಪ್ರಚೋದನೆ ನೀಡುತ್ತಿದ್ದಾರೆ. ಇನ್ನೂ ಅನೇಕ ಕೆಲಸಗಳನ್ನು ಮಾಡುತ್ತಿದ್ದಾರೆ. ಆ ಕೆಲಸ ಚೆನ್ನಾಗಿ ನಡೆಯಲೆಂದು ಹಾರೈಸುತ್ತೇನೆ.

ಉಪ ಪೊಲೀಸ್ ಆಯುಕ್ತ ಪ್ರದೀಪ್ ಗುಂಟಿ ಮಾತನಾಡಿ, ರಾಮ್‌ಸನ್ಸ್ ಗೊಂಬೆ ಮನೆಯಲ್ಲಿ ರಾಜ್ಯವಲ್ಲದೇ ದೇಶದ್ಯಾಂತ ಕುಶಲಕರ್ಮಿಗಳು, ಗೊಂಬೆಗಾರರು, ಕರ್ನಾಟಕದ ಚನ್ನಪಟ್ಟಣ, ಕಿನ್ನಾಳ, ಬೆಂಗಾಲ್, ಪಾಂಡಿಚೇರಿ ಬೇರೆ ಬೇರೆ ಭಾಗಗಳ ಗೊಂಬೆಗಳಿವೆ. ಇತಿಹಾಸ, ದೇಶದ ಸಂಸ್ಕೃತಿಯನ್ನು ಕಾಣಲಿಕ್ಕೆ ಗೊಂಬೆ ಮನೆ ಸಶಕ್ತವಾಗಿದೆ. ಇಲ್ಲಿ 10 ಸಾವಿರಕ್ಕೂ ಹೆಚ್ಚು ಗೊಂಬೆಗಳನ್ನು ಪ್ರದರ್ಶನಕ್ಕಿಡಲಾಗಿದೆ ಎಂದು ನುಡಿದರು.

ಗೊಂಬೆ ಮನೆ ದಸರಾ ಸಂದರ್ಭದಲ್ಲಿ ಪ್ರವಾಸಿಗರ ಆಕರ್ಷಣೆ ಕೇಂದ್ರವಾಗಿದೆ. ಇಲ್ಲಿಗೆ ಭೇಟಿ ನೀಡಿದರೆ ಒಂದೊಂದು ವಿಶಿಷ್ಟ ಲಭಿಸುತ್ತದೆ. ರಾಮಾಯಣ, ಮಹಾಭಾರತ, ಪುರಾಣ ಕಲೆ ದರ್ಶನ ಪಡೆಯಬಹುದು. ಇದನ್ನು ಮಕ್ಕಳು ವೀಕ್ಷಿಸಬೇಕು.

-ಪ್ರದೀಪ್ ಗುಂಟಿ, ಡಿಸಿಪಿ