ಚಾಮರಾಜನಗರ: ಕುಡಿದ ಅಮಲಿನಲ್ಲಿ ಕೋಳಿ ಸಾರು ವಿಚಾರಕ್ಕೆ ಜಗಳ ತೆಗೆದು ತನ್ನ ಸ್ನೇಹಿತನನ್ನೇ ಕೊಲೆಗೈದು ಪರಾರಿಯಾಗಿದ್ದ ಆರೋಪಿಯನ್ನು ರಾಮಾಪುರ ಪೊಲೀಸರು ತಮಿಳುನಾಡಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ದೊಮ್ಮನಗದ್ದೆ ಗ್ರಾಮದ ನಿವಾಸಿ ರಂಗಪ್ಪ (40) ಎಂಬಾತನೇ ಬಂಧಿತ. ಈತ ಅದೇ ಗ್ರಾಮದ ಕೃಷ್ಣನಾಯ್ಕ (55) ಎಂಬಾತನನ್ನು ಹತ್ಯೆ ಮಾಡಿ ಪರಾರಿಯಾಗಿದ್ದನು.
ಹತ್ಯೆಗೀಡಾದ ಕೃಷ್ಣನಾಯ್ಕ ಹಾಗೂ ಆರೋಪಿ ರಂಗಪ್ಪ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಇವರು ಲಾಕ್ ಡೌನ್ ಸಮಯದಲ್ಲಿ ಜತೆಗೆ ಸೇರಿ ಮದ್ಯ ಸೇವಿಸುತ್ತಿದ್ದರು. ಅದರಂತೆ ಜೂನ್ 23ರ ರಾತ್ರಿ ಇಬ್ಬರೂ ಒಟ್ಟಿಗೆ ಸೇರಿ ಮದ್ಯ ಸೇವೆನೆ ಮಾಡಿಕೊಂಡು ಮನೆಗೆ ಆಗಮಿಸಿದ್ದು, ಮನೆಯಲ್ಲಿ ರಾತ್ರಿ ಊಟಕ್ಕೆ ಕೋಳಿ ಸಾಂಬಾರು ಮಾಡುವಂತೆ ಕೃಷ್ಣನಾಯ್ಕ ಪತ್ನಿಗೆ ತಿಳಿಸಿದ್ದರು. ಅದರಂತೆ ಕೃಷ್ಣನಾಯ್ಕನ ಮನೆಯಲ್ಲಿ ಕೋಳಿ ಸಾಂಬಾರು ತಯಾರು ಮಾಡಲಾಗಿತ್ತು. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಕೃಷ್ಣನಾಯ್ಕ ಹೊರಗಡೆ ಹೋಗಿ ಬರುವುದಾಗಿ ಸ್ನೇಹಿತ ರಂಗಪ್ಪನಿಗೆ ತಿಳಿಸಿ ಮತ್ತೆ ಮನೆಗೆ ವಾಪಾಸ್ಸಾದನು.
ಈ ವೇಳೆ ರಂಗಪ್ಪ ಕೋಳಿ ಸಾಂಬಾರನ್ನು ಸಂಪೂರ್ಣ ತಿಂದು ಕುಳಿತ್ತಿದ್ದನು. ಇದರಿಂದ ಕುಪಿತಗೊಂಡ ಕೃಷ್ಣನಾಯ್ಕ ಹಾಗೂ ರಂಗಪ್ಪನ ನಡುವೆ ಗಲಾಟೆ ಕೈಮೀರಿತು. ಪರಿಣಾಮ ಕೃಷ್ಣನಾಯ್ಕನನ್ನು ಕುಡುಗೋಲಿನಿಂದ ಕೊಲೆಗೈದು ರಂಗಪ್ಪ ಪರಾರಿಯಾಗಿದ್ದನು. ಈ ಸಂಬಂಧ ರಾಮಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆಯನ್ನು ನಡೆಸಲಾಯಿತು.
ಈ ನಡುವೆ ಆರೋಪಿ ರಂಗಪ್ಪ ತಮಿಳುನಾಡಿನ ಹಂದಿಯೂರಿನಲ್ಲಿರುವುದು ಖಚಿತವಾದ ಹಿನ್ನಲೆಯಲ್ಲಿ ಎಸೈ ಮಂಜುನಾಥ್ ಪ್ರಸಾದ್, ಮುಖ್ಯಪೇದೆಗಳಾದ ನಿಂಗರಾಜು, ಸೈಯದ್ ಮುಸ್ತಾಕ್, ಪೇದೆಗಳಾದ ರವಿಪ್ರಸಾದ್, ಮುತ್ತುರಾಜು ಅವರನ್ನೊಳಗೊಂಡ ತಂಡ ಬಂಧಿಸಿ ವಿಚಾರಣೆಗೊಳಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.