ಕಾಕನಕೋಟೆ ವನ್ಯಜೀವಿ ವಲಯದಲ್ಲಿ ಹುಲಿಗಳು ಬದುಕಲು ದೇಶದಲ್ಲಿ ಪೂರಕ ವಾತಾವರಣ: ಜಾಗತಿಕ ಹುಲಿ ದಿನದ ಕಾರ್ಯಕ್ರಮ: ವಿಜಯ್ ಮೋಹನ್‍ರಾಜ್

ತಾಲ್ಲೂಕಿನ ಅಂತರಸಂತೆ ವನ್ಯಜೀವಿ ವಲಯ ಕಾಕನಕೋಟೆ ಸಫಾರಿ ಕೇಂದ್ರದಲ್ಲಿ ಗುರುವಾರ ನಡೆದ ಜಾಗತಿಕ ಹುಲಿ ದಿನದ ಕಾರ್ಯಕ್ರಮ

ಮೈಸೂರು, ಜುಲೈ. 29. ಹುಲಿಗಳು ಬದುಕಲು ಪೂರಕ ವಾತವರಣ ಹೊಂದಿದ್ದ 13 ದೇಶದ ಪ್ರಮುಖ ಮುಖಂಡರು 2010ರಲ್ಲಿ ಸಭೆ ಸೇರಿ ಒಂದು ಜೀವಿಯ ಸಂತತಿಯ ಸಂರಕ್ಷಣೆ ಮಾಡುಬೇಕು ಎಂದು ತೀರ್ಮಾನಿಸಿದ್ದು ಎಂದರೆ ಅದು ಹುಲಿಗೆ ಮಾತ್ರ ಎಂದು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್ ಮೋಹನ್‍ರಾಜ್ ತಿಳಿಸಿದರು.

ರಾಜೀವ್‌ ಗಾಂಧಿ ನಾಗರಹೊಳೆ ಅಭಯಾರಣ್ಯದ ನೂತನ ಲಾಂಚನ ಅನಾವರಣ, ಜನರಲ್ಲಿ ಪರಿಸರ ಕುರಿತು ಜಾಗೃತಿ ಮೂಡಿಸುವ ಸೈಕಲ್‌ ಜಾಥಾ, ಅರಣ್ಯ ವೀಕ್ಷಕರು ಅರಣ್ಯ ರಕ್ಷಕರಾಗಿ ಬಡ್ತಿ ಪಡೆದ ಸಂಭ್ರಮ, ಕಲಾವಿದರಿಂದ ಹುಲಿ ಕುಣಿತ… ಜಾಗತಿಕ ಹುಲಿ ದಿನದ ನಿಮಿತ್ತ ಕಾಕನಕೋಟೆ ಸಫಾರಿ ಕೇಂದ್ರದ ಆವರಣದಲ್ಲಿ ನಡೆದ ವಿನೂತನ ಕಾರ್ಯಕ್ರಮಗಳಿವು.

ಪರಿಸರ ಮತ್ತು ಹುಲಿ ಕುರಿತು ಜನರಲ್ಲಿ ಅರಿವು ಮೂಡಿಸಲು ಅರಣ್ಯ ಸಿಬ್ಬಂದಿ ಮತ್ತು ಬೆಂಗಳೂರಿನ ಪರಿಕ್ರಮ ಟೀಂನ 20 ಯುವಕರು ಸುಮಾರು 80 ಕಿಲೋ ಮೀಟರ್‌ ಸೈಕಲ್‌ ತುಳಿದು ಜಾಗೃತಿ ಮೂಡಿಸಿದರು. ಬೆಂಗಳೂರಿನ ಅಶ್ವಿನಿ ಅವರು ರೂಪಿಸಿರುವ ನೂತನ ಲಾಂಚನವನ್ನು ಅಪಾರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್‌ ಮೋಹನ್‌ರಾಜ್‌ ಅನಾವರಣ ಮಾಡಿದರು.

ಅಪಾರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್‌ ಮೋಹನ್‌ರಾಜ್‌ ಮಾತನಾಡಿ, ಅರಣ್ಯ ಸಿಬ್ಬಂದಿ ಕಾಡಿನ ಬಗ್ಗೆ ಸಂಪೂರ್ಣವಾಗಿ ತಿಳಿದಿರಬೇಕು. ಹುಲಿ ಸಂರಕ್ಷಣೆಯು ಆನೆ ಸೇರಿದಂತೆ ಎಲ್ಲಾ ವನ್ಯಜೀವಿ ಹಾಗೂ ನೀರಿನ ಮೂಲಗಳ ಸಂರಕ್ಷಿಸಲಾಗುತ್ತದೆ. ನಗರ ಪ್ರದೇಶದ ಜನ ನೀರಿಗೆ ತೆರಿಗೆ ಕಟ್ಟುತ್ತಾರೆ. ಆದರೆ ಆ ನೀರಿನ ಮೂಲಗಳಿರುವ ಕಾಡಿಗೆ ಯಾರು ತೆರಿಗೆ ಕಟ್ಟುತ್ತಿಲ್ಲ ಎಂದರು.

ಮನುಷ್ಯ ಪರಿಸರವನ್ನು ಭೋಗದ ವಸ್ತುವಿನ ರೀತಿಯಲ್ಲಿ ಕಾಣುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಪರಿಸರವನ್ನು ನೋಡುವ ದೃಷ್ಟಿಕೋನ ಬದಲಾಗುತ್ತಿದೆ. ಇದು ಆಶಾದಾಯಕ ಸಂಗತಿ. ಪ್ರತಿಯೊಬ್ಬರು ವನ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಒತ್ತು ನೀಡಬೇಕು. ಮತ್ತು ಅದರ ಮಹತ್ವ ಅರಿಯಬೇಕು ಎಂದರು.

ಶೃಂಗಸಭೆಗಳು ಮಹತ್ವದ ವಿಚಾರಗಳಿಗಾಗಿ ನಡೆಯುತ್ತಿತ್ತು. ಆದರೆ 2010ರಲ್ಲಿ ರಷ್ಯಾದಲ್ಲಿ ನಡೆದ ಶೃಂಗಸಭೆ ಯಲ್ಲಿ ಒಂದು ಪ್ರಭೇದದ ಉಳಿವಿಗಾಗಿ ನಿರ್ಣಯ ತೆಗೆದುಕೊಂಡಿತು. ಈ ವಿಚಾರದಲ್ಲಿ ಭಾರತ ಹುಲಿ ಸಂರಕ್ಷಣೆಯಲ್ಲಿ ಮಹತ್ವದ ಸಾಧನೆ ಮಾಡಿದ್ದು ಆರಂಭದಲ್ಲಿ 1411 ಇದ್ದ ಹುಲಿಗಳ ಅಂಖ್ಯೆ ಪ್ರಸ್ತುತ 2967ಕ್ಕೆ ಏರಿಕೆ ಕಂಡಿದೆ ಎಂದರು.

ವಿದೇಶದಲ್ಲಿ ಹುಲಿಗಳ ಅಂಗಾಂಗಕ್ಕೆ ಬೇಡಿಕೆ ಇದ್ದರಿಂದ ದೇಶದಲ್ಲಿ ಕಳ್ಳಬೇಟೆ ಹೆಚ್ಚಿ ಹುಲಿಗಳ ಸಂಖ್ಯೆ ಕ್ಷೀಣಿಸಿತ್ತು. ಹುಲಿ ಸಂರಕ್ಷಣಾ ಕಾಯಿದೆ ಜಾರಿಯಾದ ನಂತರ ಕಳ್ಳಬೇಟೆಗೆ ಕಡಿವಾಣ ಬಿದ್ದಿತು. ಇದರ ಹಿಂದೆ ಅರಣ್ಯ ಇಲಾಖೆ ಪರಿಶ್ರಮ ಹೆಚ್ಚಿದೆ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಪಿ.ಮಹಾದೇವ್‌, 2007ರಲ್ಲಿ 643.39 ಚ.ಕಿ.ಮೀ ವ್ಯಾಪ್ತಿಯನ್ನು ಗುರುತಿಸಿ ಅದನ್ನು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಯಿತು. ನಾಗರಹೊಳೆಯಲ್ಲಿ ಆನೆಗಳ ಸಾಂದ್ರತೆಯೂ ಸಹ ಹೆಚ್ಚಾಗಿರುವುದರಿಂದ 2019ರಲ್ಲಿ ಇಲ್ಲಿಗೆ 200.57 ಚ.ಕಿ.ಮೀ ಬಫರ್‌ ಪ್ರದೇಶವನ್ನು ಸೇರಿಸಿ ಒಟ್ಟು 843.93 ಚ.ಕಿ.ಮೀ ಪ್ರದೇಶವನ್ನು ಗುರುತಿಸಲಾಗಿದೆ. 2014ರ ಗಣತಿಯಲ್ಲಿ ಒಟ್ಟು 72 ಹುಲಿಗಳು ಮತ್ತು 2018ರಲ್ಲಿ 125 ಹುಲಿಗಳು ಹಾಗೂ 2020 ರಲ್ಲಿ 135 ಹುಲಿಗಳು ಕಂಡುಬಂದಿದ್ದು, ಹುಲಿಗಳ ಸಂಖ್ಯೆ ಕಳೆದ 8 ವರ್ಷಗಳಲ್ಲಿ ಶೇ.87.50 ರಷ್ಟು ಹೆಚ್ಚಾಗಿದೆ ಎಂದರು.

ಇದೇ ವೇಳೆ ಅರಣ್ಯ ವೀಕ್ಷಕ ಹುದ್ದೆಯಿಂದ ಅರಣ್ಯ ರಕ್ಷಕ ಹುದ್ದೆಗೆ ಬಡ್ತಿ ಹೊಂದಿದ 14 ಜನ ಸಿಬ್ಬಂದಿಗಳಿಗೆ ಸ್ಟಾರ್‌ ಕ್ಲಿಪ್ಪಿಂಗ್‌ ಮಾಡಲಾಯಿತು. ಅಲ್ಲದೇ ಹುಲಿಗಳ ಬಗ್ಗೆ ಜಾಗೃತಿ ಮೂಡಿಸುವ ಸೈಕಲ್‌ ಜಾಥ ನಡೆಸಿದ ಬೆಂಗಳೂರಿನ ಪರಿಕ್ರಮ ತಂಡ ಮತ್ತು ಇಲಾಖೆಯ ಮುಂಚೂಣಿ ಸಿಬ್ಬಂದಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ನಾಹರಹೊಳೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಮಹೇಶ್‌ ಕುಮಾರ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎ.ವಿ.ಸತೀಶ್‌, ಕೆ.ಪಿ.ಗೋಪಾಲ್‌, ವಲಯ ಅರಣ್ಯಾಧಿಕಾರಿಗಳಾದ ಎಸ್‌.ಎಸ್‌.ಸಿದ್ದರಾಜು, ಸಂತೋಷ ಹೂಗಾರ್‌, ಮಧು, ನಮನನಾಯಕ್‌, ಗಿರೀಶ್‌, ಹನುಮಂತ ರಾಜು, ಕಿರಣ್‌ ಭಾಗವಹಿಸಿದ್ದರು.

ಪೂರ್ಣಚಂದ್ರ ತೇಜಸ್ವಿ ಅವರು ತೇಜಸ್ವಿ ಪ್ರಕೃತಿ ಮನುಷ್ಯನ ಭಾಗವಲ್ಲ, ಮನುಷ್ಯನೇ ಪ್ರಕೃತಿ ಭಾಗ ಎಂದಿದ್ದಾರೆ. ಈ ಮಾತನ್ನು ಗಂಭೀರವಾಗಿ ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಜಾಗತಿಕ ಹುಲಿ ದಿನದ ಅಗವಾಗಿ ನಡೆದ ಸೈಕಲ್‌ ಜಾಥ ಅತ್ಯಂತ ಖುಷಿಕೊಟ್ಟಿದೆ. ಆಚಾರ್ಯ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ವನ್ಯಪ್ರಾಣಿಗಳ ಕುರಿತು ಜಾಗೃತಿ ಮೂಡಿಸಿದ್ದೇವೆ.

-ಧೀರಜ್‌, ಉಪನ್ಯಾಸಕ, ಬೆಂಗಳೂರು

ಈವರೆಗೆ ಸಮಯ ವ್ಯರ್ಥ ಮಾಡುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ವಿಶ್ವ ಹುಲಿ ದಿನದ ನಿಮಿತ್ತ ನಡೆದ ಸೈಕಲ್‌ ಜಾಥಾ ಅತ್ಯಂತ ಖುಷಿಕೊಟ್ಟಿದೆ. ಎತ್ತ ನೋಡಿದರೂ ಹಚ್ಚ ಹಸಿರು, ಕಣ್ಣಿಗಳಿಗೆ ಹಬ್ಬ. ಪ್ರತಿ 10 ಕಿಲೋ ಮೀಟರ್‌ಗೆ ಅರಣ್ಯ ಇಲಾಖೆ ಸಿಬ್ಬಂದಿ ನೀರು, ಎಳನೀರು ಕೊಟ್ಟ ಸಹಕರಿಸಿದರು. ತುಂಬಾ ಎಂಜಾಯ್‌ ಮಾಡಿದೆ. 

ಕೀರ್ತಿ, ಸಾಫ್‌್ಟವೇರ್‌ ಎಂಜಿನಿಯರ್‌, ಬೆಂಗಳೂರು

Leave a Reply

Your email address will not be published. Required fields are marked *