ಕೊರೊನಾ ನಡುವೆ ಕ್ಷಯದತ್ತವೂ ಎಚ್ಚರವಿರಲಿ!

ಕೊರೋನಾದ ಭಯದಲ್ಲಿರುವ ನಮಗೆ ಇತರೆ ರೋಗಗಳು ಬಾಧಿಸಿದರೂ ಗೊತ್ತಾಗುತ್ತಿಲ್ಲ. ಜತೆಗೆ ಆಸ್ಪತ್ರೆಗೆ ಹೋಗಲು ಬಹಳಷ್ಟು ಮಂದಿ ಭಯಪಡುತ್ತಿದ್ದಾರೆ. ಹೀಗಾಗಿಯೇ ಹೆಚ್ಚಿನ ಸಮಸ್ಯೆಗಳಿಗೆ ಜನ ಒಳಗಾಗುತ್ತಿದ್ದಾರೆ.

ಕೆಲವೊಮ್ಮೆ ಕೆಮ್ಮು, ಜ್ವರ, ಕಫ ಕೇವಲ ಕೊರೋನಾದ ಲಕ್ಷಣಗಳು ಆಗಿರದೆ ಅದು ಕ್ಷಯ ರೋಗದ ಲಕ್ಷಣವಾಗಿದ್ದರೂ ಅಚ್ಚರಿಪಡಬೇಕಾಗಿಲ್ಲ. ಯಾರೇ ಆಗಲಿ ಮೇಲಿನ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರಿಗೆ ತೋರಿಸಿ ಪರೀಕ್ಷೆ ಮಾಡಿಸಿ ತಮಗೆ ಬಂದಿರುವ ಕಾಯಿಲೆ ಯಾವುದು ಎಂಬುದನ್ನು ಮೊದಲು ಅರಿತುಕೊಂಡು ಅದಕ್ಕೆ ಚಿಕಿತ್ಸೆ ಪಡೆಯಬೇಕಾಗುತ್ತದೆ. ಅದು ಬಿಟ್ಟು ತಾವೇ ಸ್ವಯಂ ಆಗಿ ಯಾವುದೋ ಮಾತ್ರೆಗಳನ್ನು ತೆಗೆದುಕೊಳ್ಳುವುದು ಅಪಾಯಕಾರಿ.

ಹಾಗೆನೋಡಿದರೆ ಕೊರೋನಾಗಿಂತಲೂ ಭೀಕರ ಎಂದು ಕ್ಷಯರೋಗವನ್ನು ಕರೆಯಲಾಗುತ್ತಿತ್ತು. ಶತಮಾನದಿಂದಲೂ ಅತಿದೊಡ್ಡ ಸಾಂಕ್ರಾಮಿಕ ರೋಗವಾಗಿ ಜನರನ್ನು ಕಾಡುತ್ತಲೇ ಬಂದಿದೆ. ಇದು ಆರಂಭವಾದಾಗ ಸರಿಯಾದ ಚಿಕಿತ್ಸೆಯಿಲ್ಲದೆ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದರು. ಆ ದಿನಗಳಲ್ಲಿ ಕ್ಷಯ ರೋಗ ಬಂತೆಂದರೆ ಆತ ಸಾವನ್ನಪ್ಪಿದ ಎಂದೇ ಭಾವಿಸಲಾಗುತ್ತಿತ್ತು. ಆದರೆ ಇದಕ್ಕೂ ಔಷಧಿಗಳನ್ನು ಕಂಡು ಹಿಡಿಯಲಾಗಿದ್ದರೂ, ಸರ್ಕಾರದ ಹಲವಾರು ಯೋಜನೆಗಳ ನಂತರವೂ ನಿಯಂತ್ರಣ ಸಾಧ್ಯವಾಗಿಲ್ಲ. ಸಾಂಕ್ರಾಮಿಕ ರೋಗವಾಗಿರುವುದರಿಂದ ಜನರೇ ಇದರ ಬಗ್ಗೆ ಎಚ್ಚೆತ್ತುಕೊಂಡು ಎಚ್ಚರಿಕೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ.

ಕ್ಷಯ ರೋಗದ ಬಗ್ಗೆ ಹೇಳುವುದಾದರೆ ಮೈಕ್ರೊ ಬ್ಯಾಕ್ಟೀರಿಯ ಟ್ಯೂಬರ್ ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಈ ರೋಗ ಬರುತ್ತದೆ. ಇನ್ನು ಇದು ಸಾಂಕ್ರಾಮಿಕ ರೋಗವಾಗಿರುವುದರಿಂದ ಕ್ಷಯ ಸೋಂಕಿತ ವ್ಯಕ್ತಿಯು ಕೆಮ್ಮಿದಾಗ, ಸೀನಿದಾಗ ಬರುವ ತುಂತುರು ಹನಿಯೊಂದಿಗೆ ಬ್ಯಾಕ್ಟೀರಿಯವು ಗಾಳಿಯಲ್ಲಿ ಸೇರಿಕೊಳ್ಳುತ್ತದೆ. ಆ ಗಾಳಿ ಸೇವಿಸಿದಾಗ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೆ ಕ್ಷಯ ರೋಗ ಬಹು ಬೇಗ ಆ ವ್ಯಕ್ತಿಗೆ ತಗಲುವ ಸಂಭವ ಹೆಚ್ಚಾಗಿರುತ್ತದೆ.

ಮೊದಲೇ ನಮ್ಮ ಆರೋಗ್ಯ ಸರಿಯಿಲ್ಲದೆ, ರೋಗ ಪೀಡಿತರಾಗಿದ್ದರೆ ಅಂತಹವರ ಮೇಲೆ ಸಾಂಕ್ರಾಮಿಕ ರೋಗಗಳು ಬಹುಬೇಗ ತಗಲುತ್ತದೆ ಅದರಂತೆ ಎಚ್‌ಐವಿ ಪೀಡಿತರು, ಮಧುಮೇಹ, ಧೂಮಪಾನ ಮಾಡುವವರು, ಅಪೌಷ್ಟಿಕತೆಯಿಂದ ಬಳಲುತ್ತಿರುವವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅಂತಹವರಿಗೆ ಬಹು ಬೇಗ ಕ್ಷಯರೋಗ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಈ ರೋಗದ ಲಕ್ಷಣಗಳು ಹೇಗಿರುತ್ತದೆ ಎಂದರೆ ಎರಡು ವಾರಕ್ಕೂ ಹೆಚ್ಚು ಕೆಮ್ಮು ಇರುವುದು, ಜ್ವರದಿಂದ ತೂಕ ಕಡಿಮೆ ಆಗುವುದು, ಕಫದಲ್ಲಿ ರಕ್ತ ಬೀಳುವುದು ಮುಂತಾದವುಗಳು ನಮ್ಮಲ್ಲಿ ಕಂಡು ಬಂದರೆ ಇದಕ್ಕೆ ಸ್ವತಃ ತಾವೇ ಯಾವುದಾದರೂ ಮಾತ್ರೆ ತೆಗೆದುಕೊಂಡು ಕಡಿಮೆಯಾಗಬಹುದೆಂದು ಕಾಯುವುದು ಅಪಾಯಕಾರಿ. ಬದಲಿಗೆ ಈ ಲಕ್ಷಣಗಳು ಕಂಡು ಬಂದರೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಬೇಕು. ಒಂದು ವೇಳೆ ಕ್ಷಯ ರೋಗದ ಲಕ್ಷಣವಿಲ್ಲ ಎಂದಾದರೆ ಸಂತೋಷ ಪಡಬೇಕು. ಕ್ಷಯರೋಗದ ಲಕ್ಷಣವಿದ್ದರೆ ಭಯಪಡಬೇಕಾಗಿಲ್ಲ ಚಿಕಿತ್ಸೆ ಪಡೆದು ವಾಸಿ ಮಾಡಬಹುದಾಗಿದೆ.

ಈ ರೋಗ ವಿಶ್ವಮಟ್ಟದಲ್ಲಿ ಹರಡಿದ್ದು ಜಗತ್ತಿನಲ್ಲಿ 1.04 ಕೋಟಿಗೂ ಹೆಚ್ಚು ಜನರು ಕ್ಷಯ ರೋಗದಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಭಾರತ ದೇಶದಲ್ಲಿ 28.4 ಲಕ್ಷ ಜನರಿದ್ದಾರೆ. ವಿಶ್ವದ ಒಟ್ಟು ರೋಗಿಗಳಲ್ಲಿ ಭಾರತದಲ್ಲಿಯೇ ಶೇ.೨೫ ರಷ್ಟು ಮಂದಿ ಇದ್ದಾರೆ. ಅಷ್ಟೇ ಅಲ್ಲ 5.1 ಲಕ್ಷದಷ್ಟು ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಹೇಳಲಾಗಿದೆ.

ಇತ್ತೀಚೆಗಿನ ದಿನಗಳಲ್ಲಿ ಕ್ಷಯ ರೋಗದ ಬಗ್ಗೆ ಅಧ್ಯಯನಗಳು ನಡೆದಿದ್ದು, ಇದರ ತಪಾಸಣೆಗೆ ಈಗ ಅತ್ಯಾಧುನಿಕ ಯಂತ್ರೋಪಕರಣಗಳು ಬಂದಿರುವುದರಿಂದ ರೋಗವನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಜತೆಗೆ ವೈದ್ಯರ ಸಲಹೆಯಂತೆ ಮಾತ್ರೆಗಳನ್ನು ತೆಗೆದು ಕೊಂಡರೆ ಗುಣಮುಖರಾಗಬಹುದು. ಅಷ್ಟೇ ಅಲ್ಲದೆ ಸರ್ಕಾರದ ವತಿಯಿಂದಲೇ ಮಾತ್ರೆಗಳನ್ನು ನೀಡಲಾಗುತ್ತದೆ. ಹೀಗಾಗಿ ರೋಗದ ಬಗ್ಗೆ ಭಯಪಡದೆ ಸೂಕ್ತ ಚಿಕಿತ್ಸೆ ಪಡೆದು ರೋಗವನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಿದೆ.

Leave a Reply

Your email address will not be published. Required fields are marked *