ಎಲ್ಲರ ಸೆಳೆಯುವ ರೋಣ, ಸೆಸ್ಕ್, ಕೋವಿಡ್ ವ್ಯಾಕ್ಸಿನ್ ಸೇರಿ ಹಲವು ಬಗೆಯ ಗಣಪನ ಆಗಮನ


ಮೈಸೂರು: ಸುದೀಪ್ ಅವರ ರೋಣ ವೇಷಧಾರಿಯ ಗಣಪ, ಸೆಸ್ಕ್ ಕೆಲಸ ನಿರ್ವಹಿಸುವ ಗಣಪ, ಭಯ ಬಿಟ್ಟು ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂಬ ಸಂದೇಶ ಸಾರುವ ನವ ನಾವಿನ್ಯದ ಮನೆ ಮನೆಯ ಆಕರ್ಷಣೀಯ ಗಣೇಶ ಮೂರ್ತಿಗಳು ನಗರಕ್ಕಾಗಮಿಸಿದ್ದು, ಕೊರೊನಾ ನಡುವೆಯೂ ಜನ ಮನ ಗೆಲ್ಲುವ ಜತೆಗೆ ಸಾಂಸ್ಕೃತಿಕ ನಗರಿಯಲ್ಲಿ ಗಣಪನ ಸಂಭ್ರಮಕ್ಕೆ ಸಜ್ಜಾಗಿವೆ.

ಈಗಾಗಲೇ ಒಂದೆಡೆ ಸರ್ಕಾರ ಮನೆ ಹಾಗೂ ದೇವಾಲಯಗಳಿಗೆ ಸೀಮಿತವಾಗಿ ಗಣೇಶ ಹಬ್ಬವನ್ನು ಸಂಪ್ರದಾಯಿಕವಾಗಿ ಆಚರಿಸುವಂತೆ ಮಾರ್ಗಸೂಚಿಸಿ ಹೊರಡಿಸಿದೆ. ಆದರೆ,

ಆರು ತಿಂಗಳಿಂದಲೇ ಗಣೇಶಮೂರ್ತಿ ತಯಾರಿಕೆಯಲ್ಲಿ ತೊಡಗಿರುವ ನಗರದ ಕಲಾವಿದರ ಕುಟುಂಬಗಳು ಸರ್ಕಾರ ಆದೇಶಕ್ಕೆ ಎದುರು ನೋಡದೇ ಮನೆ ಹಾಗೂ ದೇವಾಲಯಗಳ ಆಕರ್ಷಣೀಯ ಗಣಪತಿ ಮೂರ್ತಿಗಳ ತಯಾರಿಕೆ ನಡೆಸಿವೆ. ಈ ನಿಟ್ಟಿನಲ್ಲಿ

ಕಳೆದ ಹದಿನೈದು ವರ್ಷಗಳಿಂದಲೂ ಕಲಾವಿದರಾಗಿಯೂ ಪ್ರತಿವರ್ಷ ನಾನಾ ಬಗೆಯ ಕಲಾಕೃತಿ ಗಣಪನ ತಯಾರಿಕೆಯಲ್ಲಿ ತೊಡಗಿರುವ ರೇವಣ್ಣ ಅವರು ಈ ಬಾರಿ ಮನೆ ಮನೆ ಗಣಪನ ತಯಾರಿಕೆಯಲ್ಲಿ ತೊಡಗಿದ್ದಾರೆ. ಇನ್ನೂ ಅರವಿಂದನಗರದ ಸೆಸ್ಕಾಂ ಅಧಿಕಾರಿಗಳ ತಂಡ ತಮ್ಮ ಕಚೇರಿಯಲ್ಲಿ ಕೂರಿಸಲು ಗಣೇಶ ಮೂರ್ತಿ ಬೇಡಿಕೆಯಿಟ್ಟ ಹಿನ್ನೆಲೆಯಲ್ಲಿ ಸೆಸ್ಕಾಂ ಕೆಲಸ ನಿರ್ವಹಿಸುವ ವೇಷಧಾರಿಯ ಗಣೇಶನನ್ನೇ ತಯಾರಿಸಿ ಅವರಿಗೆ ಕೊಡುಗೆ ನೀಡಲು ತಯಾರು ನಡೆಸಿದ್ದಾರೆ.

ಕುಟುಂಬಕ್ಕೆ ಆಧಾರ: ಕುಂಬಾರಗೇರಿಯ ಕಲಾನಿಲಯದ ನಿವಾಸಿಯಾದ ಕುಮಾರ್ ಹಾಗೂ ಶೋಭಾ ದಂಪತಿಗಳು ಹಾಗೂ ಪತ್ರ ಯಶವಂತ್ ಈ ಬಾರಿ ಹಲವು ವಿಭಿನ್ನ ಗಣಪತಿ ಮೂರ್ತಿ ತಯಾರಿಸಿ ಜನ ಮನ ಗೆಲ್ಲುವ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಜಾಗೃತಿ ಮೂಡಿಸುವ ವಾಕ್ಸಿನ್ ಸೂಜಿ ಇಟ್ಟುಕೊಂಡಿರುವ ಗಣೇಶ, ಡಾ.ರಾಜ್‌ಕುಮಾರ್ ನಟನೆಯ `ಎರಡು ಕನಸು’ ಚಿತ್ರದ ರಾಜ್‌ಕುಮಾರ್ ಅವರು ಬಜಾಜ್‌ನಲ್ಲಿ ಓಡಾಡುತ್ತಿರುವ ಮಾದರಿ, ಅಣ್ಣಬಾಂಡ್ ಸಿನಿಮಾ ಪುನೀತ್‌ರಾಜ್‌ಕುಮಾರ್ ಬೈಕ್ ಮೇಲೆ ಕುಳಿತಿರುವ ಮಾದರಿ, ಲಾಡು ತಯಾರಿಸುತ್ತಿರುವ ಅಮ್ಮ ಗೌರಿಯನ್ನು ಲಾಡಿನ ಆಸೆಗೆ ಮುದ್ದು ಮಾಡುವ ಮಾದರಿ, ಉಯ್ಯಾಲೆಯ ಮೇಲೆ ಕುಳಿತಿರುವ ಮಾದರಿ, ನಟ ಗಣೇಶನ ಜೊತೆ ಜಾಲೀ ರೈಡ್ ಹೊರಟ ಮಾದರಿ, ಪಾಂಡುರಂಗ, ಕೃಷ್ಣನ ಮಾದರಿ, ಆಮೆಯ ಮೇಲೆ ಹೊರಟ ಗಣೇಶ್, ಅಪ್ಪನ ಕೈಯಲ್ಲಿ ಮುದ್ದಾಗಿ ಮಲಗಿರುವ ಮಾದರಿ, ಡಮರುಗ ಬಾರಿಸುವ ಮಾದರಿ, ಆನೆಯ ಮೇಲೆ ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರೆಗೆ ಆನೆ ಏರಿ ಬರುವ ಮಾದರಿಗಳಲ್ಲಿ ಗಣೇಶನ ಮೂರ್ತಿಗಳು ಎಲ್ಲರ ಕೈ ಬಿಸಿ ಕರೆಯುತ್ತಿವೆ.

ಕಳೆದ ಬಾರಿ ಸಿದ್ಧತೆಯನ್ನೇ ಮಾಡಿಕೊಳ್ಳದೇ ಇದ್ದೇವು. ಆಗ ಕೊನೆ ನಾಲ್ಕು ದಿನದಲ್ಲಿ ಅನುಮತಿ ನೀಡಿದರೂ ಬೇಡಿಕೆ ಬಂದರೂ ಮೂರ್ತಿಗಳನ್ನು ಪೂರೈಸಲು ಆಗದೇ ನಷ್ಟ ಅನುಭವಿಸಬೇಕಾಯಿತು. ಈ ಬಾರಿ ಸದ್ಯ ಈಗಾಗಲೇ ದೇವಾಲಯ ಹಾಗೂ ಮನೆಗಳಿಗೆ ಸೀಮಿತವಾಗಿ ಕೂರಿಸಲು ಅನುಮತಿ ನೀಡಿದ್ದು, ಅದಕ್ಕನುಗುಣವಾದ ಮೂರ್ತಿ ತಯಾರು ಮಾಡಿದ್ದೇವೆ. ಸರ್ಕಾರದ ಯಾವುದೇ ಸಹಾಯಧನ ಇದುವರೆವಿಗೂ ದೊರೆತಿಲ್ಲ. ಸರ್ಕಾರ ಕೊಡಲಿರುವ ಸಹಾಯಧನವೂ ಯಾವುದೇ ಪ್ರಯೋಜನಕ್ಕೂ ಬರುವುದಿಲ್ಲ.

ಕೊವೀಡ್ ಎಲ್ಲರನ್ನೂ ಅತಂತ್ರಗೊಳಿಸಿರುವಂತೆ ಕಲಾವಿದರಾಗಿ ನಮ್ಮನ್ನು ಅತಂತ್ರಗೊಳಿಸಿದೆ. ಕಾರ್ಮಿಕ ಇಲಾಖೆ ಆಹಾರದ ಕಿಟ್ ನೀಡಿದ್ದು ಹೊರತು ಸರ್ಕಾರದಿಂದ ಸಿಗಬೇಕಾದ ಸಹಾಯಧನ ಸಿಕ್ಕಿಲ್ಲ. ಅನಿವಾರ್ಯವಾಗಿ ಇದರಲ್ಲೇ ಬದುಕು ನಡೆಸಬೇಕಿದೆ. ಸರ್ಕಾರ ನಮ್ಮ ಸಮುದಾಯದತ್ತಲೂ ಗಮನ ಹರಿಸಿ ಸಹಾಯ ಹಸ್ತ ನೀಡಬೇಕಿದೆ.
-ಎಂ.ರೇವಣ್ಣ, ಗಣೇಶಮೂರ್ತಿ, ತಯಾರಕರು.
ನಗರಕ್ಕೆ ಬಂದ ರೋಣ!

ಸುದೀಪ್ ಹುಟ್ಟುಹಬ್ಬ ಹಿನ್ನಲೆಯಲ್ಲಿ ಅವರ ಅಭಿಯಾನಿಯೂ ಆಗಿರುವ ಕಲಾವಿದ ಯಶವಂತ್ `ವಿಕ್ರಾಂತ್ ರೋಣ’ ಮಾದರಿ ಹಾಗೂ ಬಾಡಿ ಬಿಲ್ಡರ್ ಮಾದರಿಯ ಗಣಪತಿ ತಯಾರಿಸಿರುವುದು ಎಲ್ಲರ ಗಮನ ಸೆಳೆಯುತ್ತಿದೆ. 5ವರ್ಷಗಳಿಂದ ಗಣೇಶನ ಮೂರ್ತಿ ತಯಾರು ಮಾಡುತ್ತಿದ್ದೇನೆ. ತಂದೆಯಿಂದ ಕಲಿತ ಕಲೆ ಇದಾಗಿದೆ. ಅಣ್ಣ ರವಿಕುಮಾರ್‌ರವರು ನನಗೆ ಗಣಪತಿ ತಯಾರಿ ಮಾಡೋದನ್ನ ಹೇಳಿಕೊಟ್ಟಿದ್ದಾರೆ. ನನ್ನ ತಾಯಿ ಶೋಭಾರವರು ಮೂರ್ತಿಗೆ ಕಣ್ಣು ಬರೆಯುವುದನ್ನ ಹೇಳಿಕೊಟ್ಟಿದ್ದಾರೆ ಎನ್ನುತ್ತಾರೆ 18 ವರ್ಷದ ಯುವಕ ಯಶವಂತ.
ಅಬ್ಬರ, ಎತ್ತರದ ಗಣಪನಿಲ್ಲ..

ಕಳೆದ ಬಾರಿ ಬೃಹತ್ ಹಾಗೂ ಅತಿ ಎತ್ತರದ ಗಣಪನ ಮಾಡಿ ನಷ್ಟ ಅನುಭವಿಸಿದ್ದ ಕಲಾವಿದರೂ ಈ ಬಾರಿ ಅತಿ ಎತ್ತರ ಎಂದರೆ ಮೂರು ಅಡಿ ಗಣಪತಿಗಳನ್ನೇ ತಯಾರು ಮಾಡಿವೆ. ಆ ಮೂಲಕ ಬಾಲ ಗಣಪನನ್ನು ನಿರ್ಮಿಸಿ ಮನೆಗಳಲ್ಲಿ ಮಕ್ಕಳನ್ನು ಆಕಿರ್ಷಸುವ ನಿಟ್ಟಿನಲ್ಲಿ ಆಲೋಚಿಸಿವೆ. ಆ ಮೂಲಕ ಅಬ್ಬರ ಹಾಗೂ ಎತ್ತರದ ಗಣಪನಿಗೆ ಬ್ರೇಕ್ ಹಾಕಿವೆ.