ಮೈಸೂರು: ‘ಸಿರಿಧಾನ್ಯ ಬಳಸಿ- ಆರೋಗ್ಯ ಉತ್ತಮ ರೀತಿಯಲ್ಲಿ ಇರಿಸಿ’, ‘ವಿಷ ಮುಕ್ತ ಆರೋಗ್ಯ ದೂರವಿರಿಸಿ, ಸಿರಿಧಾನ್ಯ ಬಳಸಿ’ ಎಂಬಿತ್ಯಾದಿ ಘೋಷಣಾ ಫಲಕಗಳನ್ನು ಹಿಡಿದು ಸಿರಿಧಾನ್ಯಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಸಾಂಸ್ಕೃತಿಕ ನಗರಿಯಲ್ಲಿ ನಡೆಯಿತು. ಇದೇ ವೇಳೆ ನವಣೆ, ಚಿಯಾ, ಬರಗು, ಹಾರಕ ಸೇರಿದಂತೆ 30ಕ್ಕೂ ಹೆಚ್ಚು ಬಗೆಯ ಸಿರಿಧಾನ್ಯಗಳನ್ನು ಪ್ರದರ್ಶಿಸಿ ಗಮನ ಸೆಳೆಯಲಾಯಿತು.
ಕೃಷಿ ಇಲಾಖೆ, ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ, ಜಿಲ್ಲಾ ಕೃಷಿಕ ಸಮಾಜ, ಕೃಷಿ ತಂತ್ರಜ್ಞರ ಸಂಸ್ಥೆ, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ (ಆತ್ಮ)ಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ನಡೆದ ‘ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ-2021ರ ಜಿಲ್ಲಾಮಟ್ಟದ ಸಿರಿಧಾನ್ಯಗಳ ಕಾರ್ಯಾಗಾರ ಹಾಗೂ ವಸ್ತುಪ್ರದರ್ಶನ ಮತ್ತು ರಾಷ್ಟ್ರೀಯ ರೈತ ದಿನಾಚರಣೆ’ ಕಾರ್ಯಕ್ರಮದಲ್ಲಿ ಈ ದೃಶ್ಯ ಕಂಡುಬಂದಿತು. ಇದೇ ವೇಳೆ ‘ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ – 2023’ ಭಿತ್ತಿ ಪತ್ರವನ್ನೂ ಅನಾವರಣಗೊಳಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತನಾಡಿ, ಸಿರಿಧಾನ್ಯಗಳ ಬಗ್ಗೆ ಜಾಗೃತಿಯಿದೆ. ಆದರೆ, ಮಾರ್ಕೆಟಿಂಗ್ ಮಾಡುವ ಮೂಲಕ ಹೆಚ್ಚಿನ ಜನರನ್ನು ತಲುಪಬೇಕಿದೆ ಎಂದು ಸಲಹೆ ನೀಡಿದರು.
ಜಿಪಂ ಸಿಇಓ ಎ.ಎಂ.ಯೋಗೀಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಮಹಾಂತೇಶಪ್ಪ, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟಸೂರ್‌ಮಠ, ಬೆಂಗಳೂರು ಸಿಪಿಎಆರ್‌ಯ ಪ್ರಧಾನ ವಿಜ್ಞಾನಿ ಡಾ.ಬಿ.ಟಿ.ರಾಯ್ಡು, ಜೆಎಸ್‌ಎಸ್ ತೋಟಗಾರಿಕೆ ವಿಭಾಗ ನಿರ್ದೇಶಕ ಎನ್.ಎಂ.ಶಿವಶಂಕರಪ್ಪ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕಲ್ಮಹಳ್ಳಿ ಶಿವಕುಮಾರ್ ಪಾಲ್ಗೊಂಡಿದ್ದರು.
ನಂತರ ನಡೆದ ಸಿರಿಧಾನ್ಯಗಳ ಜಾಗೃತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಂಡ್ಯ ಬಿ.ಸಿ.ಫಾರಂ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಬಿ.ಎಸ್.ಸೌಮ್ಯಲತಾ, ಎಚ್.ಡಿ.ಕೋಟೆಯ ನಂಬಿಕೆ ಮಿಲ್ಲೆಟ್ ನಾಗರಾಜ್, ಸಿರಿಧಾನ್ಯ ಬೆಳೆಗಾರ ಹಾಗೂ ಪ್ರಗತಿಪರ ರೈತ ಹೊನ್ನೂರು ಪ್ರಕಾಶ್ ಉಪನ್ಯಾಸ ನೀಡಿದರು.