ಭಾರತದ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಜನ್ಮದಿನ ಆಗಸ್ಟ್ 29ನ್ನು ದೇಶದ್ಯಾಂತ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಈ ವೇಳೆ ನಾವೆಲ್ಲರೂ ಅವರ ಸಾಧನೆಯನ್ನು ಮೆಲುಕು ಹಾಕುತ್ತಾ ನಮ್ಮ ಸುತ್ತಮುತ್ತಲಿದ್ದ ಹಳ್ಳಿ ಆಟಗಳನ್ನು ನೆನಪು ಮಾಡಿಕೊಳ್ಳಲು ಸಕಾಲವಾಗಿದೆ.
ನಮಗೆ ನಿಮಗೆಲ್ಲರಿಗೂ ಗೊತ್ತಿರುವ ವಿಚಾರವೆಂದರೆ ಈಗ ಹಳ್ಳಿ ಆಟಗಳು ಕಾಣೆಯಾಗಿವೆ.. ಎಲ್ಲೆಲ್ಲೂ ಕ್ರಿಕೆಟ್ ಬಿಟ್ಟರೆ ಮೊಬೈಲ್ ಹಿಡಿದು ಆನ್ ಲೈನ್ ಗೇಮ್ ಗಳಲ್ಲಿ ತಲ್ಲೀನರಾದವರೇ ಹೆಚ್ಚು ಹೆಚ್ಚಾಗಿ ಕಂಡು ಬರುತ್ತಾರೆ. ಇದಕ್ಕೆ ಕಾರಣಗಳು ಅನೇಕ ಇದ್ದರೂ ಅವುಗಳೆಲ್ಲದರ ನಡುವೆ ನಾವು ಗ್ರಾಮೀಣ ಮಟ್ಟದಿಂದಲೇ ಆ ಆಟಗಳನ್ನು ನಿರ್ಲಕ್ಷಿಸುತ್ತಾ ಬಂದಿದ್ದೇ ಇವತ್ತು ಅವು ಮೂಲೆ ಗುಂಪಾಗಲು ಕಾರಣ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.
ಆಡುತ್ತಾ ಕಲಿ ಮಾಡುತ್ತಾ ತಿಳಿ ಎಂಬ ಮಾತಿನಂತೆ ಮಕ್ಕಳ ಮನಸ್ಸು ದೈಹಿಕ ಸಂಪತ್ತಿನೊಂದಿಗೆ ಸೂಕ್ತವಾಗಿ ಬೆಳೆವಣಿಗೆ ಕಾಣಲು ಮತ್ತು ಶಿಸ್ತು ರೂಢಿಸಿಕೊಳ್ಳಲು ಹಳ್ಳಿಆಟಗಳು ಹಲವು ರೀತಿಯಲ್ಲಿ ಉಪಕಾರಿಯಾಗಿದ್ದವು ಎಂಬುವುದಂತು ಸತ್ಯ. ಆಗಸ್ಟ್ 29 ಭಾರತದ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಜನ್ಮದಿನ. ಈ ದಿನನ್ನು ಭಾರತೀಯರಾದ ನಾವು ರಾಷ್ಟ್ರೀಯ ಕ್ರೀಡಾ ದಿನಾಚರಣೆಯಾಗಿ ಆಚರಿಸುತ್ತಿದ್ದೇವೆ. ಈ ವೇಳೆಯಾದರೂ ನಮ್ಮ ತಲೆಮಾರಿನವರು ಆಡಿ ಸಂಭ್ರಮಿಸಿ ಆಟಗಳನ್ನು ನಾವು ಮೆಲುಕು ಹಾಕುವುದು ಆ ಆಟಗಳಿಗೆ ನಾವು ಕೊಡುವ ಗೌರವವಾಗುತ್ತದೆ.
ಹಿಂದಿನ ಕಾಲದಲ್ಲಿ ಮಕ್ಕಳ ಮನೋರಂಜನೆಯ ಕೇಂದ್ರ ಬಿಂದುವಾಗಿದ್ದ ಮತ್ತು ಮಕ್ಕಳ ಮೈಮನವನ್ನು ಉಲ್ಲಾಸಗೊಳಿಸಿದ್ದ ಆಟಗಳು ಇವತ್ತು ಮೂಲೆಗುಂಪಾಗಿ ನಾಶವಾಗಿವೆ. ಆದರೆ ಆ ಆಟಗಳನ್ನು ನಾವು ಗಮನಿಸಿದ್ದೇ ಆದರೆ ಅದರಲ್ಲಿರುವ ಮಹತ್ವ ಹೊರಬರುತ್ತದೆ.
ಸೂಕ್ಷ್ಮವಾಗಿ ಕೆಲವೊಂದು ಆಟಗಳನ್ನು ಗಮನಿಸಿದರೆ ಹಿಂದಿನ ಕಾಲದಲ್ಲಿ ಬೇಟೆಯಾಡುವುದೇ ಮುಖ್ಯವಾಗಿದ್ದುದರಿಂದ ಗುರಿಯಿಡಲು ಅನುಕೂಲವಾಗಲೆಂದು ಗೋಲಿ, ಚಿಣ್ಣಿದಾಂಡು, ಪಿಕ್ಕಿನಾಟವಾಡಿಸುತ್ತಿದ್ದರೆ, ಅಪಹರಣ ತರಬೇತು ನೀಡುವ ಸಲುವಾಗಿ ಕೋಲು ಹಾರಿಸುವ ಆಟ, ದೇಹದ ಜಡತ್ವ ಹೊಡೆದೋಡಿಸಿ ಉತ್ಸಾಹ ತುಂಬಿಸುವ ಮತ್ತು ಬೆನ್ನಟ್ಟಿ ಅಕ್ರಮಣ ಪಟುತ್ವದ ಖೋಖೋ ಆಟ, ವ್ಯೂಹ ರಚನೆ, ಸಮರ ಸನ್ನದ್ಧತೆಗೆ ರಾಜನೀತಿಗೆ ಅನುಕೂಲವಾಗುವ ಬೇಟೆಯ ಆಟ, ತಂತ್ರವನ್ನು ಕಲಿಸುವ ಚದುರಂಗ ಹೀಗೆ ಒಂದೇ ಎರಡೇ ನೂರಾರು ಆಟಗಳು ತಮ್ಮ ಬದುಕಿನಲ್ಲಿ ಕೇವಲ ಮನರಂಜನೆ ಮಾತ್ರವಲ್ಲದೆ ಬದುಕಿಗೂ ಮಾರ್ಗದರ್ಶಿಯಾಗಿರುವುದನ್ನು ಮರೆಯುವಂತಿಲ್ಲ. ಮೊದಲೆಲ್ಲ ಹಳ್ಳಿಗಳಲ್ಲಿ ಕ್ರೀಡಾಕೂಟಗಳನ್ನು ಏರ್ಪಡಿಸಲಾಗುತ್ತಿತ್ತು. ಆ ಕ್ರೀಡಾ ಕೂಟಗಳಲ್ಲಿ ಹಳ್ಳಿ ಆಟಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತಿತ್ತು. ಆದರೆ ಬದಲಾದ ಕಾಲದಲ್ಲಿ ಹಳ್ಳಿ ಆಟಗಳ ಜಾಗವನ್ನೆಲ್ಲ ಕ್ರಿಕೆಟ್ ಆಕ್ರಮಿಸಿಕೊಂಡಿದೆ. ಈಗಲೂ ಕಾಲ ಮಿಂಚಿಲ್ಲ ಗ್ರಾಮೀಣ ಮಟ್ಟದಲ್ಲಿಯೇ ಸ್ಥಳೀಯ ಹಳ್ಳಿ ಆಟಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ. ಆ ಮೂಲಕ ಮುಂದಿನ ತಲೆಮಾರಿಗೆ ಆ ಆಟಗಳನ್ನು ನೆನಪಾಗಿ ಉಳಿಸುವ ಕೆಲಸ ಮಾಡಬೇಕಿದೆ.