ಮಡಿಕೇರಿ : ನಿರ್ಬಂಧವಿದ್ದರೂ ಜಾಲಿ ಮಾಡುವ ಸಲುವಾಗಿ ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯತಿಯ ಕೆ.ಕೆ.ಆರ್ ಟಿ.ಎಸ್ಟೇಟ್ ವೀಕ್ಷಿಸಲು ಮೈಸೂರಿನಿಂದ ಬಂದಿದ್ದ ಪ್ರವಾಸಿಗರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ವರದಿಯಾಗಿದೆ.
ಕೊಡಗಿನ ಗಡಿ ಆನೆ ಚೌಕೂರು ಚೆಕ್ ಪೋಸ್ಟ್ ನಲ್ಲಿ ಕೈಗಳಿಗೆ ಸೀಲ್ ಹಾಕಿದ್ದರೂ, ಸೀಲ್ ಅನ್ನೂ ಲೆಕ್ಕಿಸದೆ, ಗೃಹ ಬಂಧನದಲ್ಲಿ ಇರದೇ ದಕ್ಷಿಣ ಕೊಡಗಿನ ಪ್ರವಾಸಿ ತಾಣಗಳಿಗೆ ಓಡಾಡುತ್ತಾ ಮೋಜು ಮಾಡುತ್ತಿದ್ದ ಯುವಕರು ಕಾರಿನ ಹಿಂಭಾಗದಲ್ಲಿ ಎರಡು ಸೈಕಲ್ ಗಳನ್ನು ನೇತು ಹಾಕಿಕೊಂಡು ಅಡ್ದಾಡುತ್ತಿದ್ದರು. ಟೀ ಎಸ್ಟೇಟ್ ಬಳಿ ಸೆಲ್ಫಿ ತೆಗೆದು ಕೊಳ್ಳುತ್ತಿದ್ದಾಗ ಇವರನ್ನು ವೀಕ್ಷಿಸಿದ ಸ್ಥಳೀಯರು , ಇವರ ಕೈಗಳಿಗೆ ಹಾಕಿದ್ದ ಸೀಲನ್ನು ಗಮನಿಸಿ. ಅವರನ್ನು ತರಾಟೆಗೆ ತೆಗೆದು ಕೊಂಡು, ನಂತರ ಯುವಕರನ್ನು ಶ್ರೀಮಂಗಲ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಕೊಡಗಿನಲ್ಲಿ ಇನ್ನೂ ಕೂಡ ಕೊರೊನಾ ಪ್ರಕರಣ ಇಳಿಮುಖವಾಗಿಲ್ಲ. ಆದರೂ ಕೂಡ ಯಾವುದೇ ನಿರ್ಬಂಧವಿಲ್ಲದೆ ಪ್ರವಾಸಿಗರು ಕೊಡಗಿಗೆ ಬರುತ್ತಿರುವುದು ಸ್ಥಳೀಯ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕೊಡಗಿನ ಗಡಿ ಭಾಗದಲ್ಲಿ ಕೊಡಗಿಗೆ ಬರುವ ಹೊರ ಜಿಲ್ಲೆಯವರನ್ನು ತಪಾಸಣೆ ಮಾಡುತ್ತಿಲ್ಲವೆ ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತ ಪಡಿಸಿದ್ದಾರೆ. ಸ್ಥಳೀಯರು ಸಂತೆಗೆ ಹೋಗುವಾಗ ತಡೆದು ವಿಚಾರಣೆ ನಡೆಸುವ ಅಧಿಕಾರಿಗಳು ಪ್ರವಾಸಿಗರನ್ನು ಮಾತ್ರ ಯಾಕೆ ವಿಚಾರಿಸುತ್ತಿಲ್ಲ ಎಂಬುದು ಯಕ್ಷ ಪ್ರಶ್ನೆ ಯಾಗಿದೆ.
ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರವಾಸಕ್ಕೆ ಬಂದಿದ್ದ ಯುವಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಸ್ಥಳೀಯರಾದ ಮಿದೇರೀರ ಸಂತೋಷ್, ಮಿದೇರೀರ ಜೀತು, ಕಟ್ಟೇರ ಚೋಟು,ಚಟ್ಟoಗಡ ಮಂದಣ್ಣ, ಮಲ್ಲೇoಗಡ ಶಮಿ, ಅವರುಗಳು ಪ್ರವಾಸಕ್ಕೆ ಬಂದಿದ್ದ ಯುವಕರನ್ನು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರತಿ ಗ್ರಾಮದಲ್ಲಿಯೂ ಗ್ರಾಮಸ್ಥರು ತಮ್ಮ ಊರಿಗೆ ಬರುವ ಅಪರಿಚಿತರ ಮೇಲೆ ಒಂದು ಕಣ್ಣಿಟ್ಟರೆ, ನಿಯಮ ಬಾಹಿರವಾಗಿ ಕೊಡಗಿಗೆ ಬರುವರಿಗೆ ಕಡಿವಾಣ ಹಾಕಬಹುದು. ಈ ಮೂಲಕ ಕೊರೊನವನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.