‘ರಾಬರ್ಟ್‌’ ಬೆಡಗಿಯ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆ

ದರ್ಶನ್‌ ನಟನೆಯ ‘ರಾಬರ್ಟ್‌’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಆದರೆ, ಇದಕ್ಕೆ ಅಡ್ಡಗಾಲು ಹಾಕಿರುವುದು ಕೋವಿಡ್‌–19 ಎಂಬುದು ಎಲ್ಲರಿಗೂ ತಿಳಿದಿದೆ. ಕೇಂದ್ರ ಸರ್ಕಾರದ ಅನುಮತಿ ಸಿಕ್ಕಿದ ಬಳಿಕ ಚಿತ್ರಮಂದಿರಗಳ ಪ್ರದರ್ಶನ ಮತ್ತೆ ಶುರುವಾದರೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.

ಈ ಮಧ್ಯೆಯೇ ‘ರಾಬರ್ಟ್’ ತಂಡವು ದಚ್ಚು ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾದ ಬಗ್ಗೆ ಸುದ್ದಿ ಹಂಚಿಕೊಳ್ಳುವುದರಲ್ಲಿ ಹಿಂದೆ ಬಿದ್ದಿಲ್ಲ. ದರ್ಶನ್‌ ಅವರ ಹೊಸ ಪೋಸ್ಟರ್‌ಗಳನ್ನು ಬಿಡುಗಡೆ ಮಾಡುತ್ತಲೇ ಬಂದಿದೆ. ಈಗ ಚಿತ್ರದ ನಾಯಕಿ ಆಶಾ ಭಟ್‌ ಅವರ ಫಸ್ಟ್‌ಲುಕ್‌ ಅನ್ನು ಬಿಡುಗಡೆಗೊಳಿಸಿದೆ.

ಅಂದಹಾಗೆ ಇಂದು ಆಶಾ ಭಟ್‌ ಅವರ ಜನ್ಮದಿನವೂ ಹೌದು. ಹುಟ್ಟುಹಬ್ಬದ ಪ್ರಯುಕ್ತ ಫಸ್ಟ್‌ಲುಕ್‌ ಅನ್ನು ಬಿಡುಗಡೆಗೊಳಿಸಿರುವುದು ಅವರಿಗೆ ಖುಷಿ ತಂದಿದೆಯಂತೆ. ಆಶಾ ವೃತ್ತಿಬದುಕು ಆರಂಭಿಸಿದ್ದು ಬಿಟೌನ್‌ ಮೂಲಕ. ‘ರಾಬರ್ಟ್’ನಲ್ಲಿ ನಟಿಸುವ ಮೂಲಕ ಚಂದನವನದಲ್ಲೂ ಒಳ್ಳೆಯ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ಹಂಬಲ ಹೊಂದಿದ್ದಾರೆ.

‘ಕನ್ನಡದಲ್ಲಿನ ತನ್ನ ಮೊದಲ ಚಿತ್ರದಲ್ಲಿಯೇ ಆಶಾ ಮನೋಜ್ಞವಾಗಿ ನಟಿಸಿದ್ದಾರೆ. ಆಕೆಯ ನೃತ್ಯ ಎಲ್ಲರನ್ನೂ ಸಮ್ಮೋಹನಗೊಳಿಸುತ್ತದೆ. ಆಕೆಗೆ ಚಿತ್ರತಂಡದಿಂದ ಜನ್ಮದಿನದ ಶುಭಾಶಯಗಳು’ ಎಂದು ‘ರಾಬರ್ಟ್’ ನಿರ್ದೇಶಕ ತರುಣ್‌ ಸುಧೀರ್‌ ಟ್ವೀಟ್‌ ಮಾಡಿದ್ದಾರೆ.

ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಸುಧಾಕರ್‌ ಎಸ್‌. ರಾಜು ಅವರದು. ಕೆ.ಎಂ. ಪ್ರಕಾಶ್‌ ಸಂಕಲನ ನಿರ್ವಹಿಸಿದ್ದಾರೆ. ಟಾಲಿವುಡ್‌ನ ಜಗಪತಿ ಬಾಬು ಖಳನಟನಾಗಿ ನಟಿಸಿದ್ದಾರೆ. ವಿನೋದ್ ಪ್ರಭಾಕರ್, ಸೋನಾಲ್ ಮಾಂತೆರೊ, ಶಿವರಾಜ್ ಕೆ.ಆರ್. ಪೇಟೆ, ರವಿಕಿಶನ್, ಚಿಕ್ಕಣ್ಣ, ರವಿಶಂಕರ್ ತಾರಾಗಣದಲ್ಲಿದ್ದಾರೆ.

Leave a Reply

Your email address will not be published. Required fields are marked *